ADVERTISEMENT

ಕಾಶ್ ಪಟೇಲ್‌ ಎಫ್‌ಬಿಐ ನಿರ್ದೇಶಕ: ಈ ಹುದ್ದೆಗೇರಿದ ಮೊದಲ ಭಾರತೀಯ– ಅಮೆರಿಕನ್‌ 

ಪಿಟಿಐ
Published 21 ಫೆಬ್ರುವರಿ 2025, 11:33 IST
Last Updated 21 ಫೆಬ್ರುವರಿ 2025, 11:33 IST
ಕಾಶ್‌ ಪಟೇಲ್
ಕಾಶ್‌ ಪಟೇಲ್   

ನ್ಯೂಯಾರ್ಕ್: ಕಾಶ್‌ ಪಟೇಲ್ ಅವರು ಅಮೆರಿಕ ಗುಪ್ತಚರ ಸಂಸ್ಥೆ (ಎಫ್‌ಬಿಐ) ನಿರ್ದೇಶಕರ ಹುದ್ದೆಯನ್ನೇರಿದ ಮೊದಲ ಭಾರತೀಯ– ಅಮೆರಿಕನ್‌ ಎನಿಸಿಕೊಂಡರು. 

ಗುಜರಾತ್ ಮೂಲದ ದಂಪತಿಯ ಮಗನಾದ ಕಾಶ್‌ ಪಟೇಲ್ ಅವರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈ ಹಿಂದೆಯೇ ಎಫ್‌ಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದರು. ಅವರ ನೇಮಕವನ್ನು ಅಮೆರಿಕದ ಸೆನೆಟ್‌ ಗುರುವಾರ 51–49 ಮತಗಳಿಂದ ದೃಢಪಡಿಸಿದೆ.

ರಿಪಬ್ಲಿಕನ್‌ ಪಕ್ಷದ ಸೂಸನ್ ಕಾಲಿನ್ಸ್‌ ಮತ್ತು ಲೀಸಾ ಮರ್‌ಕೋವ್‌ಸ್ಕಿ ಅವರು ಕಾಶ್‌ ಅವರ ನೇಮಕದ ವಿರುದ್ಧ ಮತ ಚಲಾಯಿಸಿದರು. 44 ವರ್ಷದ ಪಟೇಲ್‌ ಅವರು, ಎಫ್‌ಬಿಐ ಮೇಲೆ ಅಮೆರಿಕದ ಜನರ ನಂಬಿಕೆಯನ್ನು ಮರು ಸ್ಥಾಪಿಸುವ ಪ್ರತಿಜ್ಞೆ ಮಾಡಿದ್ದಾರೆ.

ADVERTISEMENT

‘ಎಫ್‌ಬಿಐನ 9ನೇ ನಿರ್ದೇಶಕನಾಗಿ ನೇಮಕಗೊಂಡಿರುವುದು ನನಗೆ ಲಭಿಸಿದ ಬಹುದೊಡ್ಡ ಗೌರವ. ನನ್ನ ಮೇಲೆ ನಂಬಿಕೆಯಿರಿಸಿದ ಅಧ್ಯಕ್ಷ ಟ್ರಂಪ್‌ ಮತ್ತು ಅಟಾರ್ನಿ ಜನರಲ್‌ ಪ್ಯಾಮ್‌ ಬಾಂಡಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

‘ಅಮೆರಿಕದ ಜನರು ಪಾರದರ್ಶಕ, ಜವಾಬ್ದಾರಿಯುತ ಮತ್ತು ನ್ಯಾಯಕ್ಕೆ ಬದ್ಧವಾಗಿರುವ ಎಫ್‌ಬಿಐ ಅನ್ನು ಬಯಸುತ್ತಾರೆ. ನಮ್ಮ ನ್ಯಾಯ ವ್ಯವಸ್ಥೆಯು ರಾಜಕೀಕರಣಗೊಂಡಿದ್ದರಿಂದ ಜನರು ಎಫ್‌ಬಿಐ ಮೇಲೆ ನಂಬಿಕೆ ಕಳೆದುಕೊಂಡಿದ್ದರು. ಆದರೆ ಅದು ಈಗ ಅಂತ್ಯಗೊಂಡಿದ್ದು, ಎಫ್‌ಬಿಐ ಹೊಸ ದಿಕ್ಕಿನತ್ತ ಮುನ್ನಡೆಯಲಿದೆ’ ಎಂದಿದ್ದಾರೆ.

\ಎಫ್‌ಬಿಐ ನಿರ್ದೇಶಕನಾಗಿ ನನ್ನ ಧ್ಯೇಯ ಸ್ಟಷ್ಟ. ಸಂಸ್ಥೆಯನ್ನು ಮತ್ತಷ್ಟು ಪಾರದರ್ಶಕವನ್ನಾಗಿಸಿ ಅಮೆರಿಕದ ಜನರಿಗೆ ನಂಬಿಕೆ ಮೂಡುವಂತೆ ಮಾಡುತ್ತೇನೆ
ಕಾಶ್‌ ಪಟೇಲ್‌ ಎಫ್‌ಬಿಐ ನಿರ್ದೇಶಕ 

ಗುಜರಾತ್‌ ಮೂಲ...

ಕಾಶ್‌ ಪಟೇಲ್‌ ತಂದೆ– ತಾಯಿ ಗುಜರಾತ್ ಮೂಲದವರು. ಮೊದಲು ಕೆನಡಾದಲ್ಲಿದ್ದ ಕಾಶ್‌ ಪೋಷಕರು 1970ರಲ್ಲಿ ಅಮೆರಿಕಕ್ಕೆ ಬಂದು ನೆಲಸಿದರು. 1980ರಲ್ಲಿ ನ್ಯೂಯಾರ್ಕ್‌ನ ಗಾರ್ಡನ್‌ ಸಿಟಿಯಲ್ಲಿ ಜನಿಸಿದ ಕಾಶ್ ನ್ಯೂಯಾರ್ಕ್‌ ಮತ್ತು ವರ್ಜೀನಿಯಾದ ರಿಚ್ಮಂಡ್‌ನಲ್ಲಿ ಶಿಕ್ಷಣ ಪೂರೈಸಿದರು.  ವಕೀಲರಾದ ಅವರು ಅಂತರರಾಷ್ಟ್ರೀಯ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ನ್ಯಾಯಾಂಗ ಇಲಾಖೆ ಸೇರಿದ್ದರು. ರಾಷ್ಟ್ರೀಯ ಭದ್ರತಾ ಸಂಸ್ಥೆಯಲ್ಲಿ ಭಯೋತ್ಪಾದನಾ ಕೃತ್ಯಗಳ ವಿರುದ್ಧದ ಕಾರ್ಯಾಚರಣೆಗಳಲ್ಲಿ ಪಟೇಲ್ ಮುಖ್ಯ ಪಾತ್ರ ವಹಿಸಿದ್ದರು. ರಕ್ಷಣಾ ಇಲಾಖೆಯಲ್ಲಿಯೂ ರಕ್ಷಣಾ ಕಾರ್ಯದರ್ಶಿಗೆ ಸಿಬ್ಬಂದಿ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.