ಬಕ್ರೀದ್ ಸಂದರ್ಭದಲ್ಲಿ ಕಾಶ್ಮೀರ ಮಹಿಳೆಯೊಬ್ಬರು ಪ್ರಾರ್ಥನೆ ಸಲ್ಲಿಸಿದರು
ಪಿಟಿಐ ಚಿತ್ರ
ಶ್ರೀನಗರ: ‘ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕಾಶ್ಮೀರದ ಈದ್ಗಾ ಮೈದಾನ ಮತ್ತು ಐತಿಹಾಸಿಕ ಜಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅಧಿಕಾರಿಗಳು ಅವಕಾಶ ನೀಡಲಿಲ್ಲ. ತಮ್ಮನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು’ ಎಂದು ಹುರಿಯತ್ ಕಾನ್ಫರೆನ್ಸ್‌ನ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ಶನಿವಾರ ಆರೋಪಿಸಿದ್ದಾರೆ.
ಘಟನೆ ಕುರಿತು ಪ್ರಕಟಣೆ ಹೊರಡಿಸಿರುವ ಐತಿಹಾಸಿಕ ಜಮಾ ಮಸೀದಿ, ‘ಅಧಿಕಾರಿಗಳು ಈ ಬಾರಿಯೂ ಈದ್ ಉಲ್ ಅದಾ ವಿಶೇಷ ಪ್ರಾರ್ಥನೆ ಸಲ್ಲಿಸಲು ಈದ್ಗಾ ಮೈದಾನ ಮತ್ತು ಜಮಾ ಮಸೀದಿಯಲ್ಲಿ ಅವಕಾಶ ನೀಡಿಲ್ಲ. ಯಾರೂ ಪ್ರವೇಶಿಸದಂತೆ ಗೇಟ್‌ಗಳನ್ನು ಹಾಕಲಾಗಿದೆ. ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದು ಹೇಳಿದೆ.
ಘಟನೆಯನ್ನು ಖಂಡಿಸಿರುವ ಫಾರೂಕ್, ‘ಎಲ್ಲರಿಗೂ ಈದ್ ಶುಭಾಶಯ. ನೋವಿನ ವಾಸ್ತವಕ್ಕೆ ಕಾಶ್ಮೀರ ಮತ್ತೊಮ್ಮೆ ಸಾಕ್ಷಿಯಾಗಿದೆ. ಬಕ್ರೀದ್ ಸಂದರ್ಭದಲ್ಲಿ ನಸುಕಿನ ಪ್ರಾರ್ಥನೆಗೂ ಅವಕಾಶ ನೀಡಿಲ್ಲ. ಈದ್ಗಾದಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲ. ಜಮಾ ಮಸೀದಿಗೆ ಸತತ ಏಳನೇ ವರ್ಷವೂ ಬೀಗ ಹಾಕಲಾಗಿದೆ. ನನ್ನನ್ನೂ ಗೃಹ ಬಂಧನದಲ್ಲಿ ಇರಿಸಲಾಗಿದೆ’ ಎಂದಿದ್ದಾರೆ.
‘ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸುವ ಅವರ ಮೂಲ ಹಕ್ಕುಗಳನ್ನೇ ಕಸಿದುಕೊಳ್ಳಲಾಗಿದೆ. ಅದರಲ್ಲೂ ಇಡೀ ಜಗತ್ತು ಬಕ್ರೀದ್ ಆಚರಿಸುತ್ತಿರುವ ಸಂದರ್ಭದಲ್ಲಿ, ಮುಸಲ್ಮಾನರ ಧಾರ್ಮಿಕ ಆಚರಣೆಯನ್ನೂ ಕಸಿದುಕೊಳ್ಳಲಾಗಿದೆ. ನಮ್ಮನ್ನು ಆಳುವವರಿಗೆ ನಾಚಿಕೆಯಾಗಬೇಕು. ನಾವು ಆಯ್ಕೆ ಮಾಡಿದ ನಾಯಕರು ನಮ್ಮ ಹಕ್ಕುಗಳನ್ನು ಪದೇ ಪದೇ ಕಸಿದುಕೊಳ್ಳುತ್ತಿರುವಾಗ ಮೌನಕ್ಕೆ ಶರಣಾಗಿರುವ ನಾಯಕರಿಗೂ ನಾಚಿಕೆಯಾಗಬೇಕು’ ಎಂದು ಮಿರ್ವೈಜ್ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.