ಭಾರತ ಮತ್ತು ಪಾಕಿಸ್ತಾನ
ಐಸ್ಟೋಕ್ ಸಂಗ್ರಹ ಚಿತ್ರ
ನವದೆಹಲಿ: ‘ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ನಡುವಣ ವಿವಾದವಾಗಿದ್ದು, ಈ ಕುರಿತು ದ್ವಿಪಕ್ಷೀಯ ಚರ್ಚೆ ಮಾತ್ರ ಸಾಧ್ಯ. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಭಾರತ ಮಂಗಳವಾರ ಮತ್ತೆ ಪುನರುಚ್ಚರಿಸಿದೆ.
ಕಾಶ್ಮೀರ ವಿವಾದವನ್ನು ಇತ್ಯರ್ಥಪಡಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಭಾರತ ಈ ಮಾತು ಹೇಳಿದೆ.
‘ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಭಾರತ– ಪಾಕಿಸ್ತಾನವೇ ದ್ವೀಪಕ್ಷೀಯ ಚರ್ಚೆ ನಡೆಸಬೇಕು ಎಂಬುದು ಭಾರತದ ದೀರ್ಘ ಕಾಲದ ನಿಲುವು. ಇದರಲ್ಲಿ ಬದಲಾವಣೆ ಇಲ್ಲ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು.
ಅಣ್ವಸ್ತ್ರ ಯುದ್ಧ ಕುರಿತ ಟ್ರಂಪ್ ಅವರ ಹೇಳಿಕೆಗೆ ಜೈಸ್ವಾಲ್ ಅವರು, ‘ಪಾಕಿಸ್ತಾನದ ವಿದೇಶಾಂಗ ಸಚಿವರೂ ಕೂಡಾ ಅಣ್ವಸ್ತ್ರ ಯುದ್ಧ ಕುರಿತ ಆಯಾಮವನ್ನು ಅಧಿಕೃತವಾಗಿಯೇ ತಳ್ಳಿಹಾಕಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
‘ಅಲ್ಲದೆ, ಅಣ್ವಸ್ತ್ರ ಬೆದರಿಕೆಗೆ ಜಗ್ಗುವುದಿಲ್ಲ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಕೃತ್ಯಗಳಿಗೂ ಅವಕಾಶ ನೀಡುವುದಿಲ್ಲ ಎಂಬ ತನ್ನ ನಿಲುವನ್ನು ಈಗಾಗಲೇ ದೃಢವಾಗಿ ಹೇಳಿದೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.