
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಶ್ರೀನಗರದಲ್ಲಿ ಪ್ರತಿಭಟನೆ ನಡೆಸಲಾಯಿತು
–ಪಿಟಿಐ ಚಿತ್ರ
ಶ್ರೀನಗರ: ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಬೃಹತ್ ಪ್ರತಿಭಟನೆಗಳನ್ನು ನಡೆಸಲಾಯಿತು.
ಕಾಶ್ಮೀರದ ಧರ್ಮಗುರು, ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವಾಯಿಜ್ ಉಮರ್ ಫಾರೂಕ್ ಅವರು ಕಾಶ್ಮೀರದಾದ್ಯಂತ ಸೋಮವಾರ ಬಂದ್‌ಗೆ ಕರೆ ನೀಡಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಮತ್ತು ಮಂಗಳವಾರ ಶಾಲೆ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಲ್ ಚೌಕ್ ಸೇರಿದಂತೆ ಶ್ರೀನಗರದ ಮಧ್ಯಭಾಗದಲ್ಲಿ ಖಮೇನಿ ಭಾವಚಿತ್ರಗಳನ್ನು ಹಿಡಿದಿದ್ದ ನೂರಾರು ಪ್ರತಿಭಟನಕಾರರು ಕಪ್ಪು ಬಾವುಟಗಳನ್ನು ಬೀಸುತ್ತಾ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಪ್ರತಿಭಟನೆಯಿಂದಾಗಿ ಅಂಗಡಿ–ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಕೆಲವೆಡೆ ಸಂಚಾರ ದಟ್ಟನೆ ಉಂಟಾಗಿತ್ತು ಎಂದು ವರದಿಯಾಗಿದೆ. ಸುನ್ನಿ ನಾಯಕರು ಮತ್ತು ರಾಜಕಾರಣಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪಿಡಿಪಿ ನಾಯಕ ವಹೀದ್ ಪಾರಾ ಮತ್ತು ಜುಹೈಬ್ ಯೂಸುಫ್ ಮಿರ್ ಅವರು ಲಾಲ್ ಚೌಕ್‌ನಲ್ಲಿ ಪ್ರತಿಭಟನಕಾರರೊಂದಿಗೆ ಕಾಣಿಸಿಕೊಂಡಿದ್ದರು.
ಇಸ್ರೇಲ್‌ನ ಕ್ರಮಗಳಿಗೆ ಅಂತರರಾಷ್ಟ್ರೀಯ ಹೊಣೆಗಾರಿಕೆಯ ಕೊರತೆ ಇದೆ ಎಂದು ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವಾಯಿಜ್ ಉಮರ್ ಫಾರೂಕ್ ಟೀಕಿಸಿದ್ದಾರೆ. ಹಾಗೆಯೇ ಶಾಂತಿಯುತ ಬಂದ್ ಆಚರಿಸಲು ಮತ್ತು ಖಮೇನಿ ಪರ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಇರಾನ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಇಸ್ರೇಲ್‌ನ ಮತ್ತೊಂದು ಆಕ್ರಮಣಕಾರಿ ಕೃತ್ಯವನ್ನು ಎದುರಿಸುತ್ತಿರುವ ಇರಾನ್ ಮತ್ತು ಅಲ್ಲಿನ ಜನರಿಗಾಗಿ ನಾನು ಪ್ರಾರ್ಥನೆ ಸಲ್ಲಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಇರಾನ್ ಅನ್ನು ‘ಮುಸ್ಲಿಂ ಸಮುದಾಯದ ನಿರ್ಣಾಯಕ ಧ್ವನಿ’ ಎಂದು ಬಣ್ಣಿಸಿರುವ ಮುಫ್ತಿ, ಯಾವುದೇ ಕ್ಷಿಪಣಿ ಅಥವಾ ಬೆದರಿಕೆ ಅದರ ಸಾರ್ವಭೌಮತ್ವವನ್ನು ನಂದಿಸಲು ಅಥವಾ ಚೈತನ್ಯವನ್ನು ಮುರಿಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಶ್ರೀನಗರ, ಬುಡ್ಗಾಮ್ ಮತ್ತು ಬಂಡಿಪೋರಾದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವದಂತಿ ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಕಣಿವೆಯ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಹಗಲಿನಲ್ಲಿ ಸ್ಥಗಿತಗೊಳಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
2019ರಲ್ಲಿ ಜಮ್ಮು–ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನ ರದ್ದುಪಡಿಸಿದ್ದನ್ನು ಖಂಡಿಸಿ ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.