ಕೇದಾರನಾಥ ದೇಗುಲ
ಪಿಟಿಐ ಚಿತ್ರ
ಕೇದಾರನಾಥ: ಚಳಿಗಾಲ ಮುಗಿದ ಕಾರಣ ಚಾರ್‌ಧಾಮ್ ಯಾತ್ರಾ ಸ್ಥಳಗಳಲ್ಲಿ ಒಂದಾದ ಕೇದಾರನಾಥ ದೇಗುಲದ ಬಾಗಿಲು ತೆರೆಯಲು ಸಜ್ಜಾಗಿದೆ. ಶುಕ್ರವಾರ ಬೆಳಿಗ್ಗೆ ದೇಗುಲದ ಬಾಗಿಲು ತೆರೆಯಲಿದೆ.
ದೇಗುಲವನ್ನು 150 ಸ್ವಯಂ ಸೇವಕರು ದೇಶ, ವಿದೇಶಗಳಿಂದ ತರಿಸಲಾದ 108 ಕ್ವಿಂಟಲ್ ಹೂವುಗಳಿಂದ ಅಲಂಕರಿಸಿದ್ದಾರೆ.
ಸಮುದ್ರ ಮಟ್ಟದಿಂದ 11 ಸಾವಿರ ಅಡಿ ಎತ್ತರದಲ್ಲಿರುವ ಕೇದಾರನಾಥ ದೇಗುಲ ಉತ್ತರಾಖಂಡ್‌ನ ರುದ್ರಪ್ರಯಾಗ ಜಿಲ್ಲೆಯಲ್ಲಿದೆ.
ದೇಗುಲವನ್ನು ಗುಲಾಬಿ, ಸೇವಂತಿಗೆ ಸೇರಿ ಒಟ್ಟು 54 ವಿವಿಧ ಹೂವುಗಳಿಂದ ಅಲಂಕರಿಸಲಾಗಿದೆ. ಭಾರತದ ವಿವಿಧ ರಾಜ್ಯಗಳಿಂದ ಮಾತ್ರವಲ್ಲದೆ ನೇಪಾಳ, ಥಾಯ್ಲೆಂಡ್ ಮತ್ತು ಶ್ರೀಲಂಕಾದಿಂದಲೂ ಹೂವುಗಳನ್ನು ತರಿಸಲಾಗಿದೆ.
ಚಳಿಗಾಲದಲ್ಲಿ ಕೇದಾರನಾಥದಿಂದ ಶಿವನ ವಿಗ್ರಹವನ್ನು ಉಖಿಮಠದಲ್ಲಿರುವ ಓಂಕಾರೇಶ್ವರ ದೇಗುಲದಲ್ಲಿ ಇರಿಸಲಾಗುತ್ತದೆ. ಚಳಿಗಾಲದ ಅಂತ್ಯವಾದ ಮೇಲೆ ಗೌರಿಕುಂಡ್ ಹಾದಿಯಲ್ಲಿ ದೇಗುಲದ ಆಡಳಿತ ಕಮಿಟಿ ಸದಸ್ಯರು ವಿಗ್ರಹವನ್ನು ಭುಜದ ಮೇಲೆ ಹೊತ್ತು ಕೇದಾರನಾಥಕ್ಕೆ ತಂದು ಸ್ಥಾಪಿಸುತ್ತಾರೆ.
ನಾಳೆ ಬೆಳಿಗ್ಗೆ 6 ಗಂಟೆಯಿಂದ ವಿಧಿವಿಧಾನಗಳು ಆರಂಭವಾಗಿ 7 ಗಂಟೆಗೆ ದೇಗುಲ ಬಾಗಿಲು ತೆರೆಯಲಿದೆ ಎಂದು ದೇಗುಲದ ಪ್ರಧಾನ ಅರ್ಚಕರು ತಿಳಿಸಿದ್ದಾರೆ.
ಕೇದಾರನಾಥ ದೇಗುಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.