ಬಾಲಿವುಡ್‌ನ DDLJ ಚಿತ್ರ ಹಾಡಿಗೆ ತಲೆದೂಗಿದ ಬ್ರಿಟನ್ ಪ್ರಧಾನಿ ಸ್ಟಾರ್ಮರ್
ಮುಂಬೈ: ಭಾರತಕ್ಕೆ ಭೇಟಿ ನೀಡಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ವಾಣಿಜ್ಯ ನಗರಿ ಮುಂಬೈನಲ್ಲಿರುವ ಯಶ್‌ರಾಜ್ ಫಿಲ್ಮ್ಸ್ ಸ್ಟುಡಿಯೊಗೆ ಭೇಟಿ ನೀಡಿದ್ದು, ಬಾಲಿವುಡ್‌ನ ಸೂಪರ್ ಹಿಟ್ ಚಿತ್ರ ಡಿಡಿಎಲ್‌ಜೆಯ ‘ತುಜೆ ದೇಖಾ ತೋ ಹೈ ಜಾನಾ ಸನಮ್’ ಹಾಡು ಕೇಳಿ ಖುಷಿಪಟ್ಟಿದ್ದಾರೆ.
ಈ ಕುರಿತು ಯಶ್‌ರಾಜ್ ಫಿಲ್ಮ್ಸ್ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸ್ಟುಡಿಯೊ ಭೇಟಿ ವೇಳೆ ಸ್ಟಾರ್ಮರ್ ಅವರು ಮ್ಯಾಡ್‌ಡಾಕ್ ಫಿಲ್ಮ್ಸ್‌ನ ದಿನೇಶ್ ವಿಜನ್, ಎಕ್ಸೆಲ್ ಎಂಟರ್‌ಟೈನ್‌ಮೆಂಟ್‌ನ ರಿತೇಶ್ ಸಿಧ್ವಾನಿ ಸೇರಿ ಹಲವು ನಿರ್ಮಾಪಕರನ್ನು ಭೇಟಿಯಾಗಿದ್ದಾರೆ.
ಶಾರುಕ್ ಖಾನ್ ಮತ್ತು ಕಾಜೋಲ್ ನಟಿಸಿದ, 1995ರಲ್ಲಿ ತೆರೆಕಂಡ ‘ದಿಲ್‌ವಾಲೆ ದುಲ್‌ಹನಿಯಾ ಲೇ ಜಾಯೆಂಗೆ’ ಚಿತ್ರದ ಈ ಹಾಡು ಇಂದಿಗೂ ಹಲವರ ನೆಚ್ಚಿನದ್ದಾಗಿದೆ. ಕುಮಾರ್ ಸಾನು ಮತ್ತು ಲತಾ ಮಂಗೇಶ್ಕರ್ ಈ ಹಾಡಿಗೆ ಜೀವ ತುಂಬಿದ್ದಾರೆ.
ಭಾರತ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ, ಮುಂಬೈ ಜನಜೀವನ, ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಸೇನಾ ತರಬೇತಿಯಲ್ಲಿ ಸಹಕಾರ, ಸಶಸ್ತ್ರ ಪಡೆಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿ, ಕಡಲ ವಿದ್ಯುತ್ ವ್ಯವಸ್ಥೆಗಳ ಅಭಿವೃದ್ಧಿ, ವಾಯು ರಕ್ಷಣಾ ವ್ಯವಸ್ಥೆ ಬಲಪಡಿಸುವಿಕೆ, ಗಡಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದೂ ಸೇರಿದಂತೆ ರಕ್ಷಣಾ ಮತ್ತು ಭದ್ರತಾ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.