ADVERTISEMENT

ಅಯೋಧ್ಯೆ | ಬಾಲರಾಮನ ದರ್ಶನ ಪಡೆದ ಅರವಿಂದ ಕೇಜ್ರಿವಾಲ್, ಭಗವಂತ ಮಾನ್‌ ಕುಟುಂಬ

ಪಿಟಿಐ
Published 12 ಫೆಬ್ರುವರಿ 2024, 14:15 IST
Last Updated 12 ಫೆಬ್ರುವರಿ 2024, 14:15 IST
<div class="paragraphs"><p>ಅಯೋಧ್ಯೆಯ ಬಾಲರಾಮ ದೇಗುಲಕ್ಕೆ ಭಗವಂತ ಮಾನ್ ಹಾಗೂ ಅರವಿಂದ ಕೇಜ್ರಿವಾಲ್ ಕುಟುಂಬದವರು ಸೋಮವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು</p></div>

ಅಯೋಧ್ಯೆಯ ಬಾಲರಾಮ ದೇಗುಲಕ್ಕೆ ಭಗವಂತ ಮಾನ್ ಹಾಗೂ ಅರವಿಂದ ಕೇಜ್ರಿವಾಲ್ ಕುಟುಂಬದವರು ಸೋಮವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು

   

ಅರವಿಂದ ಕೇಜ್ರಿವಾಲ್ ಎಕ್ಸ್ ಖಾತೆಯ ಚಿತ್ರ

ಅಯೋಧ್ಯೆ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಕುಟುಂಬ ಸಮೇತರಾಗಿ ಅಯೋಧ್ಯೆಯ ಬಾಲರಾಮನ ದೇಗುಲಕ್ಕೆ ಸೋಮವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ADVERTISEMENT

ತಮ್ಮ ಭೇಟಿ ಕುರಿತು ಮಾತನಾಡಿರುವ ಕೇಜ್ರಿವಾಲ್, ‘ಬಾಲರಾಮನ ದರ್ಶನ ಪಡೆದಿದ್ದು ನನ್ನ ಅದೃಷ್ಟವೇ ಸರಿ. ದೇವಾಲಯಕ್ಕೆ ಭೇಟಿ ನೀಡಿದ ನಂತರ ಮನಸ್ಸಿಗೆ ಶಾಂತಿ ಲಭಿಸಿತು. ನನಗಾದ ಆನಂದವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ಭವ್ಯ ಹಾಗೂ ಸುಂದರವಾದ ದೇಗುಲ ನಿರ್ಮಾಣವಾಗಿದ್ದು ಇಡೀ ಜಗತ್ತಿಗೇ ಶುಭ ಸಂಕೇತ. ಇದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಸಂಖ್ಯೆಯ ರಾಮನ ಭಕ್ತರು ದೇಗುಲಕ್ಕೆ ಭೇಟಿ ನೀಡಲು ಅವಕಾಶವಾಗಲಿದೆ. ಎಲ್ಲರ ಸುಖ, ಶಾಂತಿ ಹಾಗೂ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದೇವೆ’ ಎಂದಿದ್ದಾರೆ.

ಎಎಪಿ ಮುಖಂಡರು ತಮ್ಮ ಕುಟುಂಬ ಸಮೇತರಾಗಿ ದೇಗುಲಕ್ಕೆ ಸೋಮವಾರ ಭೇಟಿ ನೀಡಿದರು. ದೇವಾಲಯದ ಆವರಣದಲ್ಲಿ 15 ನಿಮಿಷಗಳಿಗೂ ಹೆಚ್ಚು ಕಾಲ ಇದ್ದರು.

ಎಎಪಿ ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಕೇಜ್ರಿವಾಲ್ ಅವರಿಗೆ ಜ. 22ರಂದು ನಡೆದ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಸಮಾರಂಭದ ನಂತರ ಕುಟುಂಬ ಸಮೇತರಾಗಿ ದೇಗುಲಕ್ಕೆ ಭೇಟಿ ನೀಡುವುದಾಗಿ ಅವರು ಹೇಳಿದ್ದರು.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಉಭಯ ನಾಯಕರಿಗೆ ಭೋಜನ ಆಯೋಜಿಸಿದ್ದರು.

ಭಗವಂತ ಮಾನ್ ಅವರು ಪ್ರತಿಕ್ರಿಯಿಸಿ, ‘ದೇಶವು ಬಹು ಸಂಸ್ಕೃತಿಯ ನಾಡು. ಇಲ್ಲಿ ಎಲ್ಲಾ ಧರ್ಮಗಳ ನಂಬಿಕೆಗಳು, ಉತ್ಸವಗಳನ್ನೂ ಆಚರಿಸಲಾಗುತ್ತದೆ. ದೇಶದಲ್ಲಿ ಸೋದರತ್ವ ಮತ್ತು ಶಾಂತಿ ನೆಲೆಸುವಂತೆ ಪ್ರಾರ್ಥಿಸಲಾಯಿತು’ ಎಂದಿದ್ದಾರೆ.

ಅಯೋಧ್ಯೆ ಭೇಟಿ ಕುರಿತು ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿರುವ ಕೇಜ್ರಿವಾಲ್, ‘ಪಾಲಕರು, ಪತ್ನಿ ಜತೆ ಅಯೋಧ್ಯೆಯಗೆ ಭೇಟಿ ನೀಡಿ ಬಾಲರಾಮನ ದರ್ಶನ ಪಡೆದೆ. ಮರ್ಯಾದಾ ಪುರುಷೋತ್ತಮನ ದರ್ಶನ ಪಡೆದು, ದೇಶದ ಕಲ್ಯಾಣ ಹಾಗೂ ಮಾನವತೆ ನೆಲೆಸುವಂತೆ ಮಾಡಲು ಪ್ರಾರ್ಥಿಸಲಾಯಿತು. ಶ್ರೀರಾಮಚಂದ್ರ ಎಲ್ಲರಿಗೂ ಒಳಿತನ್ನು ಮಾಡಲಿ. ಜೈ ಶ್ರೀರಾಮ್’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.