ADVERTISEMENT

ಕೊಟ್ಟಾಯಂ ಆಸ್ಪತ್ರೆ ಕಟ್ಟಡ ಕುಸಿತ: ಮೃತರ ಕುಟುಂಬಕ್ಕೆ ಪರಿಹಾರ, ಉದ್ಯೋಗದ ಭರವಸೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜುಲೈ 2025, 5:57 IST
Last Updated 5 ಜುಲೈ 2025, 5:57 IST
<div class="paragraphs"><p>ಕೇರಳದ ಕೊಟ್ಟಾಯಂ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ಕುಸಿತ</p></div>

ಕೇರಳದ ಕೊಟ್ಟಾಯಂ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ಕುಸಿತ

   

ತಿರುವನಂತಪುರ: ಕೇರಳದ ಕೊಟ್ಟಾಯಂನ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಟ್ಟಡವೊಂದು ಕುಸಿದು ಮೃತಪಟ್ಟ ಮಹಿಳೆ ಕುಟುಂಬಕ್ಕೆ ರಾಜ್ಯ ಸರ್ಕಾರ ₹50,000 ಪರಿಹಾರ ನೀಡಿದ್ದು, ಹೆಚ್ಚಿನ ಸಹಾಯದ ಭರವಸೆ ನೀಡಿದೆ.

ಸಚಿವ ವಿ.ಎನ್. ವಾಸವನ್ ಕುಟುಂಬವನ್ನು ಭೇಟಿ ಮಾಡಿ ಪರಿಹಾರ ಮೊತ್ತವನ್ನು ಹಸ್ತಾಂತರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡುವ ಬೇಡಿಕೆಗಳ ಕುರಿತು ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು.

ADVERTISEMENT

ಮೃತಪಟ್ಟ ಮಹಿಳೆಯ (ಬಿಂದು) ಮಗಳಿಗೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗುವುದು ಮತ್ತು ಚಿಕಿತ್ಸಾ ವೆಚ್ಚವನ್ನು ಕಾಲೇಜು ಭರಿಸಲಿದೆ. ಬಿಂದು ಅವರ ಮಗನಿಗೆ ಶೀಘ್ರದಲ್ಲೇ ತಾತ್ಕಾಲಿಕ ಉದ್ಯೋಗ ನೀಡಲಾಗುವುದು. ಶಾಶ್ವತ ಉದ್ಯೋಗದ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಾಸವನ್ ತಿಳಿಸಿದ್ದರು .

ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಬಿಂದು ಅವರ ಕುಟುಂಬ ಸದಸ್ಯರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

ಕೊಟ್ಟಾಯಂನ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಟ್ಟಡವೊಂದು ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿತ್ತು. ಘಟನೆಯಲ್ಲಿ ಬಾಲಕಿ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು.

ಮೃತ ಮಹಿಳೆಯನ್ನು ತಳಯೋಲಾಪರಂಬುವಿನ ಬಿಂದು (52) ಎಂದು ಗುರುತಿಸಲಾಗಿತ್ತು. ಅಲೀನಾ (11), ಅಮಲ್ ಪ್ರದೀಪ್ (20) ಜಿನು ಸಾಜಿ (38) ಗಾಯಾಳುಗಳು. ಸದ್ಯ ಗಾಯಾಳುಗಳು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಟ್ಟಡ (ವಾರ್ಡುಗಳಿಗೆ ಹೊಂದಿಕೊಂಡಿದ್ದ ಟಾಯ್ಲೆಟ್ ಕಾಂಪ್ಲೆಕ್ಸ್‌) ಕುಸಿತಕ್ಕೆ ಕಾರಣ ತಿಳಿದು ಬಂದಿಲ್ಲ. ಆದರೆ, ಕುಸಿದ ಕಟ್ಟಡ ಹಲವು ದಶಕಗಳಷ್ಟು ಹಳೆಯದ್ದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.