ADVERTISEMENT

ವಿದೇಶದಿಂದ ಬರುವ ಕೇರಳೀಯರಿಗಾಗಿ ಕೇರಳ ಸಜ್ಜು: ಏನಿದು ರಿವರ್ಸ್ ಕ್ವಾರಂಟೈನಿಂಗ್?

​ಪ್ರಜಾವಾಣಿ ವಾರ್ತೆ
Published 7 ಮೇ 2020, 7:13 IST
Last Updated 7 ಮೇ 2020, 7:13 IST
ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌   

ತಿರುವನಂತಪುರ: ದೇಶದ ಇತರೆ ರಾಜ್ಯಗಳು ಮತ್ತು ವಿದೇಶಗಳಿಂದ ಬರುವ ಕೇರಳೀಯರಿಗಾಗಿ ಪ್ರತ್ಯೇಕ ಸೌಲಭ್ಯ ಕಲ್ಪಿಸಲು ಹಾಗೂ ರಿವರ್ಸ್ ಕ್ಯಾರೆಂಟೈನಿಂಗ್ ಮಾಡಲು ಕೇರಳಸರ್ಕಾರಸಜ್ಜುಗೊಂಡಿದೆ.

ಕೊರೊನಾ ವೈರಸ್‌ ಸೋಂಕಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಇರುವ ವೃದ್ಧರು, ಮಕ್ಕಳನ್ನು (ದುರ್ಬಲ ವರ್ಗ) ಪ್ರತ್ಯೇಕವಾಗಿರಿಸುವುದು ರಿವರ್ಸ್ ಕ್ವಾರಂಟೈನಿಂಗ್‌ನ ಪ್ರಮುಖ ಗುರಿಯಾಗಿದೆ. ಮನೆಗಳಲ್ಲಿ ಸಾಕಷ್ಟು ಸೌಲಭ್ಯಗಳನ್ನು ಹೊಂದಿರದವರಿಗೂ ಪ್ರತ್ಯೇಕ ಸೌಲಭ್ಯಗಳನ್ನು ಒದಗಿಸುವಂತಹ ಕ್ರಮಗಳನ್ನು ಸರ್ಕಾರ ರೂಪಿಸುತ್ತಿದೆ.

ಈಗಾಗಲೇ ಕೇರಳ ಸರ್ಕಾರ ರಿವರ್ಸ್ ಕ್ಯಾರೆಂಟೈನಿಂಗ್ ಕ್ರಮಗಳನ್ನು ಆರಂಭಿಸಿದೆ. ಇದರ ಭಾಗವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯೊಳಗೆ ಇರಬೇಕೆಂದು ಪದೇ ಪದೇ ಹೇಳುತ್ತಿದ್ದಾರೆ. ಈಗಾಗಲೇ ಆರೋಗ್ಯ ಕಾರ್ಯಕರ್ತರು ಸ್ಥಳೀಯ ಮಟ್ಟದಲ್ಲಿ ಮಕ್ಕಳು ಮತ್ತು ವೃದ್ಧರ ಮೇಲೆ ನಿಗಾ ವಹಿಸಿದ್ದಾರೆ.

ADVERTISEMENT

ರಿವರ್ಸ್ ಕ್ಯಾರೆಂಟೈನಿಂಗ್‌ನ ಭಾಗವಾಗಿ ಸರ್ಕಾರ ವಯಸ್ಸಾದವರಿಗೆಕೌನ್ಸೆಲಿಂಗ್ ಸೇವೆಗಳನ್ನು ನೀಡುತ್ತಿದೆ. ದೀರ್ಘಕಾಲೀನ ಲಾಕ್‌ಡೌನ್‌ ಪರಿಣಾಮ ಅವರು ಖಿನ್ನತೆಗೆ ಜಾರುವ ಸಾಧ್ಯತೆಗಳಿರುವುದರಿಂದ ಅಪ್ತ ಸಮಾಲೋಚನೆ ನಡೆಸಲಾಗುತ್ತಿದೆ.
ಲಾಕ್‌ಡೌನ್ ಪ್ರಾರಂಭದಿಂದಲೂ ಕೌನ್ಸೆಲಿಂಗ್ ಸೇವೆಗಳನ್ನು ನೀಡಲಾಗುತ್ತಿದ್ದು ಸುಮಾರು 1.93 ಲಕ್ಷ ವೃದ್ಧರು ಈ ಪ್ರಯೋಜನ ಪಡೆದಿದ್ದಾರೆ.

ಕೇರಳ ಸರ್ಕಾರದ ಮತ್ತೊಂದು ಉತ್ತಮ ಕ್ರಮವೆಂದರೆ,ಸಾಕಷ್ಟು ಸೌಲಭ್ಯಗಳಿಲ್ಲದವರಿಗೆ ಪ್ರತ್ಯೇಕ ಸೌಕರ್ಯ ಕಲ್ಪಿಸಲು ಸ್ಥಳೀಯವಾಗಿ ಖಾಲಿ ಇರುವ ಮನೆಗಳನ್ನು ಗುರುತಿಸಿರುವುದು. ಅಲ್ಲಿ ಅಗತ್ಯ ಇರುವವರಿಗೆ ಕ್ಯಾರೆಂಟೈನ್ ಮಾಡಲು ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದೆ. ಈಗಾಗಲೇ ಸುಮಾರು 2.5 ಲಕ್ಷ ಕ್ಯಾರೆಂಟೈನ್ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ.

ದೀರ್ಘಕಾಲ ಲಾಕ್‌ಡೌನ್‌ ಮಾಡುವ ಬದಲಾಗಿ ಕೊರೊನಾ ವೈರಸ್ ‌ಅನ್ನು ನಿಯಂತ್ರಣದಲ್ಲಿ ಇರಿಸುವುದೇ ಸೋಂಕಿನ ನಿಗ್ರಹಕ್ಕೆ ಇರುವ ಅತ್ಯುತ್ತಮ ಮಾರ್ಗ. ಪ್ರತಿಯೊಬ್ಬರು ನೈರ್ಮಲ್ಯ ಕ್ರಮಗಳನ್ನು ಪಾಲಿಸುವುದು ಹಾಗೂ ಮಕ್ಕಳು, ವೃದ್ಧರನ್ನು ಸೋಂಕಿನಿಂದ ರಕ್ಷಿಸುವುದು ಮುಖ್ಯವಾಗಿದೆ ಎಂದು ಆರೋಗ್ಯ ಇಲಾಖೆಯ ನೋಡೆಲ್ ಅಧಿಕಾರಿ ಡಾ. ಅಮರ್ ಫೆಟ್ಟಲ್ತಿಳಿಸಿದ್ದಾರೆ.

ವಿದೇಶಗಳಿಂದ ಕೇರಳೀಗರನ್ನ ಕರೆತರುವ ಸಿದ್ಧತ ಕಾರ್ಯಗಳು ನಡೆಯುತ್ತಿವೆ. ಆರೋಗ್ಯ ಇಲಾಖೆಯು ಗುರುವಾರ ವಿಮಾನಗಳ ಕ್ಯಾಬಿನ್ ಸಿಬ್ಬಂದಿಗೆ ವೈಯಕ್ತಿಕ ಸಂರಕ್ಷಣಾ ಸೂಟ್‌ಗಳನ್ನು ಬಳಸುವುದು ಮತ್ತು ಆರೋಗ್ಯ ತುರ್ತುಸ್ಥಿತಿ ನಿಭಾಯಿಸುವ ಬಗ್ಗೆ ತರಬೇತಿ ನೀಡಿತು.

ರಾಜ್ಯದ 207 ಸರ್ಕಾರಿ ಆಸ್ಪತ್ರೆಗಳು ಮತ್ತು 125 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್‌–19 ಚಿಕಿತ್ಸೆಗಾಗಿ ಸಿದ್ಧಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.