ADVERTISEMENT

ಹಿಂದೂ ಯುವತಿ ವಿವಾಹಕ್ಕೆ ಈದ್‌ ಮಿಲಾದ್‌ ಮುಂದೂಡಿ ಸಾಮರಸ್ಯದ ಸಂದೇಶ ಸಾರಿದರು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 9:12 IST
Last Updated 11 ನವೆಂಬರ್ 2019, 9:12 IST
ಮಹಲ್ ಸಮಿತಿ ಸದಸ್ಯರೊಂದಿಗೆ ನವ ದಂಪತಿ
ಮಹಲ್ ಸಮಿತಿ ಸದಸ್ಯರೊಂದಿಗೆ ನವ ದಂಪತಿ   

ತಿರುವನಂತಪುರಂ: ರಾಮ ಜನ್ಮಭೂಮಿ - ಬಾಬರಿ ಮಸೀದಿ ಕುರಿತಂತೆ ಸುಪ್ರೀಂ ತೀರ್ಪು ಪ್ರಕಟಗೊಂಡು ಕೋಮು ಸಾಮರಸ್ಯ ಕಾಪಾಡಲುಇಡೀ ದೇಶದಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದರೆ, ಇತ್ತ ಕೇರಳದ ಗ್ರಾಮವೊಂದು ಕೋಮು ಸಾಮರಸ್ಯದ ಸಂದೇಶ ರವಾನಿಸಿದೆ.

ಉತ್ತರ ಕೇರಳದ ಕೋಯಿಕೋಡ್ ಜಿಲ್ಲೆಯ ಗ್ರಾಮೀಣ ಪ್ರದೇಶದ ಪೆರಂಬು ಸಮೀಪದ ಪಲೇರಿಯಲ್ಲಿರುವ ಮಸೀದಿ ಹತ್ತಿರದಲ್ಲಿ ವಾಸಿಸುತ್ತಿದ್ದ ಹಿಂದು ಸಮುದಾಯದ ಯುವತಿಯ ವಿವಾಹ ಪರಿಗಣಿಸಿ ಈದ್ ಮಿಲಾದ್ ಆಚರಣೆಯನ್ನೇ ಭಾನುವಾರ ಮುಂದೂಡಿ ಮಾದರಿಯಾಗಿದೆ.

ದಿ. ನಾರಾಯಣನ್ ನಂಬಿಯಾರ್ ಮತ್ತು ಇಂದಿರಾ ಎಂಬುವರ ಪುತ್ರಿ ಪ್ರತ್ಯೂಷಾ ತನ್ನ ಪತಿ ವಿನು ಪ್ರಸಾದ್ ಅವರೊಂದಿಗೆ ಮಸೀದಿಗೆ ತೆರಳಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ADVERTISEMENT

ಪೆಮಂಬ್ರದ ಇಡಿವೆಟ್ಟಿ ಜುಮಾ ಮಸೀದಿಯ ಅಧಿಕಾರಿಗಳು ನೆರೆಮನೆ ಯುವತಿಯ ಮದುವೆ ಇರುವುದನ್ನು ತಿಳಿದ ಕೂಡಲೇ, ಮಹಲ್ ಸಮಿತಿ ಅಧ್ಯಕ್ಷ ಮೊಯಿದು ಹಾಜಿಯನ್ನು ಭೇಟಿ ಮಾಡಿದ್ದಾರೆ ಮತ್ತು ಪ್ರವಾದಿ ಮೊಹಮ್ಮದ್ ಅವರ ಜನ್ಮದಿನಾಚರಣೆಯನ್ನು ನವೆಂಬರ್ 10ರಿಂದ 17ಕ್ಕೆ ಮುಂದೂಡಲು ನಿರ್ಧರಿದ್ದಾರೆ.

ಮಹಲ್ ಸಮಿತಿಯ ಕಾರ್ಯದರ್ಶಿ ಎನ್.ಸಿ. ಅಬ್ದುರಹಮನ್ ಮಾತನಾಡಿ, ಈ ಪ್ರದೇಶದಲ್ಲಿರುವ ಕೋಮು ಸಾಮರಸ್ಯವನ್ನು ಕಾಪಾಡಲು ಸರ್ವಾನುಮತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ ಈದ್ ಮಿಲಾದ್ ಆಚರಣೆಯು ಮಸೀದಿಯಲ್ಲಿ ಮುಂಜಾನೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ನಡೆಯುತ್ತದೆ. ಈ ವೇಳೆ ಧ್ವನಿವರ್ಧಕಗಳ ಬಳಕೆ ಮತ್ತು ಆಹಾರವನ್ನು ಸಹ ನೀಡಲಾಗುತ್ತದೆ. ಇದರಿಂದಾಗಿ ಮದುವೆಗೆ ತೊಂದರೆ ಉಂಟಾಗುತ್ತಿತ್ತು. ಹಾಗಾಗಿ ಮುಂದಿನ ಭಾನುವಾರ ಆಚರಣೆಯನ್ನಿಟ್ಟುಕೊಳ್ಳಲು ನಾವು ನಿರ್ಧರಿಸಿದೆವು ಎಂದು ತಿಳಿಸಿದ್ದಾರೆ.

ಪ್ರತ್ಯೂಷಾ ಮದುವೆಯಲ್ಲಿ ಸಮಿತಿ ಸದಸ್ಯರು ಸಹ ಭಾಗವಹಿಸಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.