ನವದೆಹಲಿ: ಲೋಕಸಭೆಯ ಮುಂಬರುವ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿ ತೊಡಗಿರುವ ಕಾಂಗ್ರೆಸ್, ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಪುತ್ರಿ ವೈ.ಎಸ್.ಶರ್ಮಿಳಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತಿತರರು ಬುಧವಾರ ಆಂಧ್ರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ಘಟಕದ ಮುಖಂಡರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ, ಚರ್ಚಿಸಿದರು.
ಈ ಸಂದರ್ಭದಲ್ಲಿ, ಶರ್ಮಿಳಾ ಅವರ ಸೇರ್ಪಡೆಯು ಪಕ್ಷದ ಪುನಶ್ಚೇತನಕ್ಕೆ ನೆರವಾಗಲಿದೆ ಎಂದು ಆಂಧ್ರಪ್ರದೇಶದ ನಾಯಕರು ಹೈಕಮಾಂಡ್‌ಗೆ ತಿಳಿಸಿದರು. ಸಭೆಯಲ್ಲಿ ಭಾಗಿಯಾಗಿದ್ದ ಶೇ 90ರಷ್ಟು ನಾಯಕರು ಶರ್ಮಿಳಾ ಸೇರ್ಪಡೆ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಆಂಧ್ರಪ್ರದೇಶದಲ್ಲಿ ಶೇ 2ರಷ್ಟು ಮತ ಹೊಂದಿರುವ ಕಾಂಗ್ರೆಸ್, ಚುನಾವಣೆಯಲ್ಲಿ ‘ಜಾದೂ’ ಸಂಭವಿಸುತ್ತದೆ ಎಂದೇನೂ ಭಾವಿಸಿಲ್ಲ. ಆದರೆ, ಶರ್ಮಿಳಾ ಸೇರ್ಪಡೆಯಿಂದ ರಾಜ್ಯದಲ್ಲಿ ಹಿಡಿತ ಸಾಧಿಸಬಹುದು ಎಂದು ನಂಬಿದೆ.
ತೆಲಂಗಾಣದಲ್ಲಿ ತಮ್ಮದೇ ಪ್ರತ್ಯೇಕ ಪಕ್ಷ ಸ್ಥಾಪಿಸಿರುವ ಶರ್ಮಿಳಾ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು.
‘ಕಾಂಗ್ರೆಸ್ ಸೇರಲು ಶರ್ಮಿಳಾ ಅವರೂ ಬಯಸಿದ್ದಾರೆ. ಆದರೆ, ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಶರ್ಮಿಳಾ ಅವರ ಸೇರ್ಪಡೆ ವಿಳಂಬವಾಗುತ್ತಿದೆ. ಶರ್ಮಿಳಾ ಮತ್ತು ಹೈಕಮಾಂಡ್ ಜೊತೆಗಿನ ಮಾತುಕತೆ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಅಂದುಕೊಂಡಂತೆ ಆದರೆ ಶೀಘ್ರವೇ ಅವರು ಕಾಂಗ್ರೆಸ್ ಸೇರಲಿದ್ದಾರೆ’ ಎಂದು ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.
ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತುಕತೆ ನಡೆಸಲು ಶರ್ಮಿಳಾ ಅವರು ಗುರುವಾರ ನವದೆಹಲಿಗೆ ತೆರಳಲಿದ್ದಾರೆ. ಪಕ್ಷ ತೊರೆದವರು ಮತ್ತೆ ವಾಪಸ್ ಬರಲು ಇಚ್ಛಿಸುತ್ತಿರುವವರನ್ನು ಬರಮಾಡಿಕೊಳ್ಳಬೇಕು ಎಂದು ಖರ್ಗೆ ಮತ್ತು ರಾಹುಲ್ ಗಾಂಧಿ ತಿಳಿಸಿದರು ಎಂದೂ ಮೂಲಗಳು ಹೇಳಿವೆ.
ಆಂಧ್ರಪ್ರದೇಶದಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ 22 ಕ್ಷೇತ್ರಗಳಲ್ಲಿ ವೈಎಸ್‌ಆರ್‌ಸಿಪಿ ಮತ್ತು ಮೂರು ಕ್ಷೇತ್ರಗಳಲ್ಲಿ ಟಿಡಿಪಿ ಗೆದ್ದಿದೆ.
ಸರಣಿ ಸಭೆ:
ವಿರೋಧ ಪಕ್ಷಗಳ ಮೈತ್ರಿಕೂಟವಾದ ‘ಇಂಡಿಯಾ’ ಸೀಟು ಹಂಚಿಕೆ ಕುರಿತ ಮಾತುಕತೆಗೆ ಒತ್ತಾಯಿಸುತ್ತಿರುವ ನಡುವೆಯೇ, ವಿವಿಧ ರಾಜ್ಯಗಳ ನಾಯಕರೊಂದಿಗೆ ಕಾಂಗ್ರೆಸ್ ಹೈಕಮಾಂಡ್ ಸರಣಿ ಸಭೆಗಳನ್ನು ನಡೆಸುತ್ತಿದೆ.
ಬುಧವಾರ ಸಭೆ ಬಳಿಕ ಖರ್ಗೆ ಅವರು, ‘ಪ್ರಮುಖ ಕಾರ್ಯತಂತ್ರಗಳನ್ನು ರೂಪಿಸುವ ಸಭೆ ನಡೆಸಲಾಯಿತು. ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಬಲಗೊಳಿಸಲು ಅಗತ್ಯವಿರುವ ಸಲಹೆಗಳನ್ನು ನಾಯಕರು ಹಂಚಿಕೊಂಡರು’ ಎಂದು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
‘ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಚುಕ್ಕಾಣಿ ಹಿಡಿದ ನಂತರ ತಳಮಟ್ಟದಲ್ಲಿ ಪರಿಸ್ಥಿತಿ ಬದಲಾಗುತ್ತಿದೆ ಎಂದು ಪ್ರತಿಯೊಬ್ಬರೂ ಭಾವಿಸಿದ್ದೇವೆ. ನಾಯಕರು ಮತ್ತು ಕಾರ್ಯಕರ್ತರು ಕಠಿಣ ಪರಿಶ್ರಮ ಪಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್‌ವಿಂದರ್ ಸಿಂಗ್ ಸುಖ್ಖು, ‘ರಾಜ್ಯದಲ್ಲಿ ನಾಲ್ಕು ಲೋಕಸಭಾ ಕ್ಷೇತ್ರಗಳಿದ್ದು, ಎಲ್ಲದರಲ್ಲೂ ಕಾಂಗ್ರೆಸ್ ಬಲವಾಗಿದೆ’ ಎಂದು ಹೇಳಿದರು. ಸದ್ಯ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಸದಸ್ಯರಿದ್ದಾರೆ.
ನಾಗ್ಪುರ: ಮುಂಬರುವ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಕಾಂಗ್ರೆಸ್ ಪಕ್ಷದ 139ನೇ ಸಂಸ್ಥಾಪನಾ ದಿನದಂದೇ ಅಧಿಕೃತವಾಗಿ ಚಾಲನೆ ನೀಡಲು ಪಕ್ಷವು ಸಜ್ಜಾಗಿದ್ದು ಮಹಾರಾಷ್ಟ್ರದ ನಾಗ್ಪುರದಲ್ಲಿ ಗುರುವಾರ ‘ಹೈನ್ ತಯ್ಯಾರ್ ಹಮ್’ (ನಾವು ಸಿದ್ಧ) ಬೃಹತ್ ರ‍್ಯಾಲಿ ಆಯೋಜಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ‘ದೇಶದ ಜನರ ಪಾಲಿಗೆ ಇದೊಂದು ಐತಿಹಾಸಿಕ ಗಳಿಗೆಯಾಗಲಿದೆ’ ಎಂದು ಹೇಳಿದರು. ತುರ್ತು ಪರಿಸ್ಥಿತಿ ನಂತರ ಇಂದಿರಾ ಗಾಂಧಿ ಅವರು ನಾಗ್ಪುರದಲ್ಲಿ ಸಾರ್ವಜನಿಕ ಸಭೆ ನಡೆಸಿದ್ದರು. ಬಳಿಕ ಕಾಂಗ್ರೆಸ್ ವಿದರ್ಭದ ಎಲ್ಲಾ ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿತ್ತು. ಇತಿಹಾಸವು ಈ ಬಾರಿ ಮರುಕಳಿಸಲಿದೆ. ದೇಶದಲ್ಲಿ ಬೃಹತ್ ಬದಲಾವಣೆಯಾಗಲಿದೆ’ ಎಂದು ಪಟೋಲೆ ಹೇಳಿದರು.
ರ‍್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಮತ್ತು ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯ ಕಚೇರಿ ಇರುವ ನಾಗ್ಪುರದಲ್ಲಿಯೇ ಕಾರ್ಯಕ್ರಮ ನಡೆಯುತ್ತಿರುವುದರಿಂದ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.