ADVERTISEMENT

ಕಾಂಗ್ರೆಸ್‌ ತೊರೆದ ನಟಿ ಖುಷ್ಬೂ; ನಿರೀಕ್ಷೆಯಂತೆ ಬಿಜೆಪಿ ಸೇರ್ಪಡೆ

ಏಜೆನ್ಸೀಸ್
Published 12 ಅಕ್ಟೋಬರ್ 2020, 9:11 IST
Last Updated 12 ಅಕ್ಟೋಬರ್ 2020, 9:11 IST
ನಟಿ, ರಾಜಕಾರಣಿ ಖುಷ್ಬೂ ಸುಂದರ್‌
ನಟಿ, ರಾಜಕಾರಣಿ ಖುಷ್ಬೂ ಸುಂದರ್‌   

ನವದೆಹಲಿ: ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದ ನಟಿ ಖುಷ್ಬೂ ಸುಂದರ್ ನಿರೀಕ್ಷೆಯಂತೇ ಬಿಜೆಪಿಗೆ ಸೇರ್ಪಡೆಯಾದರು ‘ದೇಶವು ಅಭಿವೃದ್ಧಿಪಥದಲ್ಲಿ ಸಾಗಲು, ಸರಿಯಾದ ದಿಕ್ಕಿನಲ್ಲಿ ದೇಶವನ್ನು ಕರೆದೊಯ್ಯಲು ನಮಗೆ ಪ್ರಧಾನಿ ನರೇಂದ್ರ ಮೋದಿಯಂಥ ವ್ಯಕ್ತಿ ಅಗತ್ಯವಿದೆ’ ಎಂದು ಪಕ್ಷ ಸೇರ್ಪಡೆಯ ಬಳಿಕ ಖುಷ್ಬೂ ಪ್ರತಿಕ್ರಿಯಿಸಿದರು.

ಸೋಮವಾರ ಬಿಜೆಪಿಗೆ ಸೇರುವ ಸಾಧ್ಯತೆ ಇರುವುದಾಗಿ ವರದಿಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರಾದ ಖುಷ್ಬೂ ಸುಂದರ್ ಸೋಮವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 'ಪಕ್ಷದಲ್ಲಿನ ಕೆಲವು ಮುಖಂಡರ ನಿರ್ಧಾರಗಳನ್ನು ಹೇರುವ ಹಾಗೂ ತಮ್ಮನ್ನು ನಿಗ್ರಹಿಸುವ ಧೋರಣೆಯನ್ನು ಪ್ರತಿಭಟಿಸಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ಭಾನುವಾರ ಸಂಜೆ ಖುಷ್ಬೂ ತಮಿಳುನಾಡಿನಿಂದ ದೆಹಲಿ ತಲುಪಿದ್ದಾರೆ.

ADVERTISEMENT

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಖುಷ್ಬೂ, 'ಪಕ್ಷದಲ್ಲಿ ವಾಸ್ತವ ಪರಿಸ್ಥಿತಿಯ ಸಂಪರ್ಕ ಇಲ್ಲದವರು ಅಥವಾ ಸಾರ್ವಜನಿಕವಾಗಿ ಗುರುತಿಸಿಕೊಳ್ಳದ ವ್ಯಕ್ತಿಗಳು ನಿಯಂತ್ರಣ ಹೇರುತ್ತಿದ್ದಾರೆ...' ಎಂದಿದ್ದಾರೆ. ಈ ಮೂಲಕ ಆರು ವರ್ಷಗಳ ಕಾಂಗ್ರೆಸ್ ಜೊತೆಗಿನ ನಂಟು ಮುರಿದುಕೊಂಡಿದ್ದಾರೆ.

2010ರಲ್ಲಿ ಖುಷ್ಬೂ ಡಿಎಂಕೆ ಸೇರ್ಪಡೆಯಾಗಿದ್ದರು. ಆಗ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿತ್ತು. ಆದರೆ, 2014ರಲ್ಲಿ ಡಿಎಂಕೆ ತೊರೆದ ಅವರು ಸೋನಿಯಾ ಗಾಂಧಿ ಜೊತೆಗಿನ ಭೇಟಿ ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 2019ರ ಲೋಕಸಭಾ ಚುನಾವಣೆಯ ಡಿಎಂಕೆ–ಕಾಂಗ್ರೆಸ್‌ ಮೈತ್ರಿಯಲ್ಲಿ ಖುಷ್ಬೂ ಅವರಿಗೆ ಟಿಕೆಟ್‌ ಸಿಗಲಿಲ್ಲ, ಅಲ್ಲದೇ ರಾಜ್ಯಸಭೆಗೂ ಆಯ್ಕೆ ಮಾಡಲಿಲ್ಲ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಸಮ್ಮುಖದಲ್ಲಿ ಖಷ್ಬೂ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಅವರೊಂದಿಗೆ ತಮಿಳುನಾಡಿನ ಐಆರ್‌ಎಸ್‌ ಅಧಿಕಾರಿ ಹಾಗೂ ಯುಟ್ಯೂಬರ್‌ ಸಹ ಬಿಜೆಪಿಗೆ ಸೇರಲಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್‌.ಮುರುಗನ್‌ ಶನಿವಾರದಿಂದಲೂ ನವದೆಹಲಿಯಲ್ಲೇ ಇದ್ದಾರೆ.

ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನು ಎಂಟು ತಿಂಗಳು ಬಾಕಿ ಇದೆ.

ಮುಂಬೈನ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ಖುಷ್ಬೂ ಚಿಕ್ಕಂದಿನಿಂದಲೂ ನಟನೆಯಲ್ಲಿ ತೊಡಗಿಸಿಕೊಂಡವರು. 90ರ ದಶಕದಲ್ಲಿ ತಮಿಳುನಾಡಿನ ಅತ್ಯಂತ ಜನಪ್ರಿಯ ಸ್ಟಾರ್‌ ನಟರಲ್ಲಿ ಖುಷ್ಬೂ ಸಹ ಒಬ್ಬರಾಗಿದ್ದರು. ಆ ಸಮಯದಲ್ಲಿ ಅಭಿಮಾನಿಗಳು ಅವರಿಗಾಗಿಯೇ ದೇವಾಲಯವನ್ನೂ ಕಟ್ಟಿದ್ದರು. ಅನಂತರದಲ್ಲಿ ಅವರು ಟಿವಿ ಧಾರಾವಾಹಿಗಳಲ್ಲಿ ನಟಿಸಿದರು ಹಾಗೂ ಟಿವಿ ನಿರೂಪಣೆಗಳನ್ನು ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.