ಪ್ರಾತಿನಿಧಿಕ ಚಿತ್ರ
ಲಖನೌ: ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ ಜಿಲ್ಲಾಡಳಿತವು ಒತ್ತುವರಿ ಜಾಗದಲ್ಲಿ ನಿರ್ಮಿಸಿದ್ದ ಗುಡಿಸಲುಗಳನ್ನು ಕೆಡವುತ್ತಿದ್ದ ವೇಳೆ, ಕೆಲವು ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಬಾಲಕಿಯೊಬ್ಬಳು ಏಕಾಏಕಿ ತನ್ನ ಗುಡಿಸಲೊಳಗೆ ಓಡಿ ಪುಸ್ತಕವನ್ನು ತಂದುಕೊಂಡ ಘಟನೆ ನಡೆದಿದೆ.
ಬಾಲಕಿಯನ್ನು ಅನನ್ಯಾ ಎಂದು ಗುರುತಿಸಲಾಗಿದೆ.
ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಬುಲ್ಡೋಜರ್‌ನಲ್ಲಿ ಗುಡಿಸಲುಗಳನ್ನು ನೆಲಸಮ ಮಾಡುತ್ತಿದ್ದ ವೇಳೆಯೇ ಕೆಲವು ಗುಡಿಸಿಲಿಗೆ ಬೆಂಕಿ ಕಾಣಿಸಿಕೊಂಡಿತ್ತು. ಅನನ್ಯಾ ಗುಡಿಸಿಲಿನ ಪಕ್ಕದಲ್ಲೂ ಬೆಂಕಿ ಹೊತ್ತಿಕೊಂಡಿತ್ತು. ಹೀಗಾಗಿ ಆಕೆ ಓಡೋಡಿ ಹೋಗಿ ಪುಸ್ತಕ ಮತ್ತು ಬ್ಯಾಗ್ ಅನ್ನು ಹೊರತಂದುಕೊಂಡಿದ್ದಾಳೆ.
‘ನನ್ನ ಪುಸ್ತಕ ಮತ್ತು ಇತರ ವಸ್ತುಗಳನ್ನು ಹೊರ ತಂದುಕೊಳ್ಳದಿದ್ದರೆ ಅವೆಲ್ಲವೂ ನಾಶವಾಗುತ್ತಿತ್ತು. ಇದರಿಂದ ನಾನು ಓದನ್ನು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಅನನ್ಯಾ ಮಾತನಾಡುವ ವೇಳೆ ಹೇಳಿದ್ದಾಳೆ.
ಬಾಲಕಿಯ ವಿಡಿಯೊವನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಅಂಬೇಡ್ಕರ್ ನಗರದಲ್ಲಿ ಜಿಲ್ಲಾಡಳಿತವು ತಮ್ಮ ಅಧಿಕಾರದ ಶಕ್ತಿಯನ್ನು ತೋರಿಸಿಕೊಳ್ಳಲು ಜನರ ಗುಡಿಸಲುಗಳನ್ನು ನೆಲಸಮ ಮಾಡುತ್ತಿದೆ. ಆದರೆ ಬಾಲಕಿ ಹೋಗಿ ತನ್ನ ಪುಸ್ತಕಗಳನ್ನು ಜೋಪಾನ ಮಾಡಿಕೊಂಡಿದ್ದಾಳೆ. ಇವರು ‘ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ‘ ಎಂದು ಹೇಳುವ ಅದೇ ಬಿಜೆಪಿ ಜನರು!’ ಎಂದು ಬರೆದುಕೊಂಡಿದ್ದಾರೆ.
ಬಾಲಕಿಯನ್ನು ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣ ಕೊಡಿಸಲಾಗುವುದು, ಎಲ್ಲಾ ವೆಚ್ಚವನ್ನು ಪಕ್ಷ ಭರಿಸಲಿದೆ ಎಂದು ಸ್ಥಳೀಯ ಸಮಾಜವಾದಿ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.