ನವದೆಹಲಿ: ಅಪಹರಣ ಪ್ರಕರಣವೊಂದರ ಸಂಬಂಧ ತಮಿಳುನಾಡಿನ ಐಪಿಎಸ್ ಅಧಿಕಾರಿ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಚ್.ಎಂ.ಜಯರಾಂ ಅವರ ಅಮಾನತು ಕುರಿತು ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿತು.
ಈ ಮುನ್ನ ಅಧಿಕಾರಿಯನ್ನು ಬಂಧಿಸಲು ಮದ್ರಾಸ್ ಹೈಕೋರ್ಟ್ ಮೌಖಿಕ ಆದೇಶ ನೀಡಿತ್ತು.
‘ಅಧಿಕಾರಿಯನ್ನು ಮಂಗಳವಾರ ವಶಕ್ಕೆ ಪಡೆದಿದ್ದು, ಸಂಜೆ 5 ಗಂಟೆ ವೇಳೆಗೆ ಬಿಡುಗಡೆ ಮಾಡಲಾಯಿತು’ ಎಂದು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್, ಮನಮೋಹನ್ ಅವರಿದ್ದ ‘ಸುಪ್ರೀಂ’ ಪೀಠಕ್ಕೆ ತಮಿಳುನಾಡು ಸರ್ಕಾರದ ಪರ ವಕೀಲರು ತಿಳಿಸಿದರು.
‘ಐಪಿಎಸ್ ಅಧಿಕಾರಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಆದರೆ, ಸರ್ಕಾರ ಅವರನ್ನು ಅಮಾನತು ಮಾಡಿದೆ’ ಎಂದು ಅಧಿಕಾರಿ ಪರ ವಕೀಲರು ಪೀಠಕ್ಕೆ ತಿಳಿಸಿದರು.
‘ಹಿರಿಯ ಅಧಿಕಾರಿಯನ್ನು ಅಮಾನತಿನಲ್ಲಿ ಇಡುವ ಅಗತ್ಯವೇನಿತ್ತು? ಇಂತಹ ಕ್ರಮಗಳು ನೈತಿಕ ಸ್ಥೈರ್ಯ ಕುಗ್ಗಿಸಲಿದ್ದು, ಆತಂಕ ಮೂಡಿಸುವಂತಹದ್ದಾಗಿದೆ’ ಎಂದು ಪೀಠ ಹೇಳಿತು.
‘ಆರೋಪಿಯ ಹೇಳಿಕೆಯನ್ನೇ ಆಧರಿಸಿ ಕೋರ್ಟ್ ನನ್ನನ್ನು ಬಂಧಿಸುವಂತೆ ಹೈಕೋರ್ಟ್ ಸೂಚಿಸಿದೆ’ ಎಂದು ವಾದಿಸಿದ್ದ ಅಧಿಕಾರಿ ಸುಪ್ರೀಂ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿದ ಸುಪ್ರೀಂ ಪೀಠ, ಈ ಕುರಿತು ಹೆಚ್ಚಿನ ವಿವರಗಳೊಂದಿಗೆ ಅಂದು ಹಾಜರಾಗಲು ಸರ್ಕಾರದ ಪರ ವಕೀಲರಿಗೆ ಸೂಚಿಸಿತು.
ಏಪ್ರಿಲ್ 5ರಂದು ಯುವತಿಯ ಅಪಹರಣ ನಡೆದಿದ್ದು, ಅದಕ್ಕಾಗಿ ಜಯರಾಂ ಅವರ ಅಧಿಕೃತ ವಾಹನ ಬಳಕೆ ಆಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.