ADVERTISEMENT

ರಮ್ಮಿ ಆಡುತ್ತಿದ್ದ ಸಚಿವ ಮಾಣಿಕರಾವ್‌ ಕೊಕಾಟೆ ತಕ್ಷಣ ರಾಜೀನಾಮೆ ನೀಡಲಿ: ಸುಪ್ರಿಯಾ

ರಮ್ಮಿ ಆಟವಾಡಿದ ವಿಚಾರವನ್ನು ಸಂಸತ್ತಿನಲ್ಲಿ ಕೇಳುತ್ತಿದ್ದಾರೆ: ಸಂಸದೆ ಒತ್ತಾಯ

ಪಿಟಿಐ
Published 26 ಜುಲೈ 2025, 13:48 IST
Last Updated 26 ಜುಲೈ 2025, 13:48 IST
<div class="paragraphs"><p>ಎನ್‌ಸಿಪಿ (ಶರದ್‌ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ </p></div>

ಎನ್‌ಸಿಪಿ (ಶರದ್‌ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ

   

–ಪಿಟಿಐ ಚಿತ್ರ 

ಪುಣೆ: ‘ವಿಧಾನಸಭಾ ಅಧಿವೇಶನ ನಡೆಯುವಾಗ ಮೊಬೈಲ್‌ನಲ್ಲಿ ರಮ್ಮಿ ಆಡುತ್ತಿದ್ದರು ಎಂಬ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಕೃಷಿ ಸಚಿವ ಮಾಣಿಕರಾವ್‌ ಕೊಕಾಟೆ ತಕ್ಷಣವೇ ರಾಜೀನಾಮೆ ನೀಡಬೇಕು’ ಎಂದು ಎನ್‌ಸಿಪಿ(ಶರದ್ ಪವಾರ್ ಬಣ) ಕಾರ್ಯಾಧ್ಯಕ್ಷೆ, ಸಂಸದೆ ಸುಪ್ರಿಯಾ ಸುಳೆ ಒತ್ತಾಯಿಸಿದ್ದಾರೆ.

ADVERTISEMENT

‘ರಮ್ಮಿ ವಿಡಿಯೊ ಘಟನೆ ಹಾಗೂ ಇನ್ನಿತರ ವಿಚಾರಗಳು ಮಹಾರಾಷ್ಟ್ರದ ಘನತೆಗೆ ರಾಷ್ಟ್ರಮಟ್ಟದಲ್ಲಿ ಕುಂದು ಉಂಟು ಮಾಡುತ್ತಿವೆ. ರಮ್ಮಿ ಕಾರ್ಡ್ ಆಟವಾಡಿದ ವಿಚಾರವನ್ನು ಪ್ರತಿಯೊಬ್ಬರೂ ಸಂಸತ್ತಿನಲ್ಲಿ ಕೇಳುತ್ತಿದ್ದಾರೆ. ನೈತಿಕ ಹೊಣೆ ಹೊತ್ತು ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು’ ಎಂದು ಈ ವೇಳೆ ಒತ್ತಾಯಿಸಿದರು.

‘ಲಡ್ಕೀ ಬಹೀನ್‌ ಯೋಜನೆ’ ಅಡಿಯಲ್ಲಿ 14 ಸಾವಿರ ನಕಲಿ ಫಲಾನುಭವಿಗಳ ಸೇರ್ಪಡೆಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ, ಸರ್ಕಾರವು ಸಮಗ್ರ ತನಿಖೆ ನಡೆಸಬೇಕು. ಸಾಧ್ಯವಾದರೆ. ಈ ಕುರಿತು ಎಸ್‌ಐಟಿ, ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದಲೇ ತನಿಖೆ ನಡೆಸಲಿ’ ಎಂದು ಒತ್ತಾಯಿಸಿದರು.

ಹಿಂಜೇವಾಡಿ ಟೆಕ್‌ ಪಾರ್ಕ್‌ನಲ್ಲಿ ಮೂಲ ಸೌಕರ್ಯ ಕಾಮಗಾರಿ ಪರಿಶೀಲನೆಗೆಂದು ಇತ್ತೀಚಿಗೆ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಭೇಟಿ ನೀಡಿದ್ದ ವೇಳೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಸುಪ್ರಿಯಾ ಸುಳೆ, ‘ಸಮಸ್ಯೆಗಳು ಹೆಚ್ಚಾದರೆ, ಸಾಫ್ಟ್‌ವೇರ್‌ ಕಂಪನಿಗಳು ಹೈದರಾಬಾದ್‌, ಬೆಂಗಳೂರಿಗೆ ವಲಸೆ ಹೋಗುತ್ತವೆ. ಹೆಚ್ಚುತ್ತಿರುವ ಸಂಚಾರ ದಟ್ಟಣೆ ತಪ್ಪಿಸಲು ಐಟಿ ಕಂಪನಿಗಳು ಕೂಡ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು’ ಎಂದು ಸಲಹೆ ನೀಡಿದರು.

ಶನಿ ದೇವಾಲಯಕ್ಕೆ ಭೇಟಿ ನೀಡಿದ ಕೊಕಾಟೆ

ನಂದೂರ್‌ಬರ್‌: ಇತ್ತೀಚಿಗಿನ ಬೆಳವಣಿಗೆಗಳಿಂದ ಹಿನ್ನಡೆ ಅನುಭವಿಸಿರುವ ಮಹಾರಾಷ್ಟ್ರ ಕೃಷಿ ಸಚಿವ ಮಾಣಿಕ್‌ ರಾವ್‌ ಕೊಕಾಟೆ ಅವರು ಇಲ್ಲಿನ ಶನಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ‘ಬರ ಹಾಗೂ ದುರಾದೃಷ್ಟವನ್ನು ಹೋಗಲಾಡಿಸಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ನನ್ನಂಥವರ ಬದುಕಿನಲ್ಲಿ ಸಮಸ್ಯೆಗಳಿದ್ದರೆ ಅದು ಕೂಡ ಕೊನೆಯಾಗಲಿ ಎಂದು ಪ್ರಾರ್ಥಿಸಿದ್ದೇನೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.