ಪ್ರಾಡಾ ಚಪ್ಪಲಿ
ಚಿತ್ರ ಕೃಪೆ: prada ಇನ್‌ಸ್ಟಾಗ್ರಾಂ
ಮುಂಬೈ: ಕೊಲ್ಹಾಪುರಿ ಚಪ್ಪಲಿಯ ವಿನ್ಯಾಸವನ್ನು ಅನಧಿಕೃತವಾಗಿ ಬಳಸಿಕೊಳ್ಳಲಾಗಿದೆ ಎಂದು ಇಟಲಿಯ ಫ್ಯಾಷನ್ ಕಂಪನಿ ಪ್ರಾಡಾ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಪ್ರಾಡಾ ಕಂಪನಿಯು ಕೊಲ್ಹಾಪುರಿ ಚಪ್ಪಲಿ ವಿನ್ಯಾಸದ ಪಾದರಕ್ಷೆಯನ್ನು ಸಿದ್ಧಪಡಿಸಿ ಅದನ್ನು ₹1.20 ಲಕ್ಷಕ್ಕೆ ಮಾರಾಟ ಮಾಡಿದ್ದು ಸುದ್ದಿಯಾಗಿತ್ತು. ಇದನ್ನು ಪ್ರಶ್ನಿಸಿ ಐವರು ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾ. ಸಂದೀಪ್ ಮಾರ್ನೆ ಅವರಿದ್ದ ವಿಭಾಗಿಯ ಪೀಠವು, ‘ಅರ್ಜಿದಾರರು ಸಂಬಂಧಿತ ವ್ಯಕ್ತಿಗಳಲ್ಲ ಅಥವಾ ನೋಂದಾಯಿತ ಮಾಲೀಕರಲ್ಲ ಅಥವಾ ಚಪ್ಪಲಿ ತಯಾರಿಸುವ ಸಂಸ್ಥೆಯೂ ಅಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
‘ಕೊಲ್ಹಾಪುರಿ ಚಪ್ಪಲಿಯ ಮಾಲೀಕರಲ್ಲದ ನಿಮಗೆ ಈ ಪ್ರಕರಣದ ಹೇಗೆ ಸಂಬಂಧಿಸುತ್ತದೆ? ಮತ್ತು ಇದು ಹೇಗೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸುತ್ತದೆ? ಇದಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ ಧಾವೆ ಹೂಡಬಹುದು’ ಎಂದು ಪೀಠ ಹೇಳಿತು.
‘ಭೌಗೋಳಿಕ ಮಾನ್ಯತೆ (ಜಿಐ) ಪಡೆದ ಸರಕುಗಳ ಕಾಯ್ದೆಯಡಿಯಲ್ಲಿ ಕೊಲ್ಹಾಪುರಿ ಚಪ್ಪಲಿಗೆ ಜಿಐ ರಕ್ಷಣೆ ಇದೆ. ಅದನ್ನು ಪ್ರಾಡಾ ಉಲ್ಲಂಘಿಸಿದೆ’ ಎಂದು ಅರ್ಜಿ ಸಲ್ಲಿಸಿದ ವಕೀಲರು ನ್ಯಾಯಾಲಕ್ಕೆ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ‘ಈ ಮಾನ್ಯತೆ ಯಾರಿಗೆ ಲಭಿಸಿದೆಯೋ ಅವರು ಬಂದು ಅರ್ಜಿ ಸಲ್ಲಿಸಲಿ. ಅವರು ತಮ್ಮ ಹಕ್ಕು ಉಲ್ಲಂಘನೆಯನ್ನು ಪ್ರಶ್ನಿಸಲಿ’ ಎಂದು ಅರ್ಜಿಯನ್ನು ವಜಾಗೊಳಿಸಿತು.
ಉಂಗುಷ್ಠ ಇರುವ ಚಪ್ಪಲಿಯನ್ನು ಬೇಸಿಗೆ ಸಂಗ್ರಹದಲ್ಲಿ ಪ್ರಾಡಾ ಕಂಪನಿ ಪ್ರದರ್ಶಿಸಿತ್ತು. ಇದು ಕೊಲ್ಹಾಪುರಿ ಚಪ್ಪಲಿಯನ್ನೇ ಹೋಲುವಂತಿತ್ತು. ಜೋಡಿ ಚಪ್ಪಲಿಗೆ ₹1.20 ಲಕ್ಷ ಎಂದು ಬೆಲೆ ನಮೂದಿಸಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.