ADVERTISEMENT

ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: CCTV ದೃಶ್ಯಾವಳಿ ಲಭ್ಯ; ಪೊಲೀಸ್

ಪಿಟಿಐ
Published 29 ಜೂನ್ 2025, 3:57 IST
Last Updated 29 ಜೂನ್ 2025, 3:57 IST
   

ಕೋಲ್ಕತ್ತ: ದಕ್ಷಿಣ ಕೋಲ್ಕತ್ತದ ಕಾನೂನು ಪದವಿ ವಿದ್ಯಾರ್ಥಿನಿ ಮೇಲೆ ಜೂನ್‌ 25ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಆರೋಪಗಳನ್ನು ದೃಢಪಡಿಸುವಂತಹ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂನ್ 25ರಂದು (ಬುಧವಾರ) ಮಧ್ಯಾಹ್ನ 3.30ರಿಂದ ರಾತ್ರಿ 10.50ರವರೆಗೆ ಏಳು ಗಂಟೆಗಳ ಅವಧಿಯಲ್ಲಿ ಕಾಲೇಜು ಆವರಣದ ಸುತ್ತಲಿನ ಚಲನವಲನಗಳು ಸೆರೆಯಾಗಿವೆ. ಸಂತ್ರಸ್ತೆಯನ್ನು ಭದ್ರತಾ ಸಿಬ್ಬಂದಿಯ ಕೋಣೆಗೆ ಬಲವಂತವಾಗಿ ಕರೆದುಕೊಂಡು ಹೋಗುತ್ತಿರುವುದು ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.

ಮೂವರು ಆರೋಪಿಗಳು, ಭದ್ರತಾ ಸಿಬ್ಬಂದಿ ಮತ್ತು ಸಂತ್ರಸ್ತೆಯ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ. ಪ್ರಕರಣ ಸಂಬಂಧ ನಾವು ಈಗಾಗಲೇ ಕ್ಯಾಂಪಸ್‌ನ ವಿದ್ಯಾರ್ಥಿಗಳ ಕೊಠಡಿ, ಶೌಚಾಲಯ ಮತ್ತು ಭದ್ರತಾ ಸಿಬ್ಬಂದಿಯ ಕೋಣೆಯಲ್ಲಿ ಸಾಕ್ಷಿಗಳನ್ನು ಸಂಗ್ರಹಿಸಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಮೂರು ಕೊಠಡಿಗಳಲ್ಲಿ ಕೂದಲು, ಬಾಟಲಿಗಳು, ಹಾಕಿ ಸ್ಟಿಕ್‌ ಪತ್ತೆಯಾಗಿದೆ. ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅತ್ಯಾಚಾರದ ವೇಳೆ ಆರೋಪಿಗಳು ಮೊಬೈಲ್‌ನಲ್ಲಿ ಕೃತ್ಯವನ್ನು ಚಿತ್ರೀಕರಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಅದರಂತೆ ಆರೋಪಿಗಳ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡು ಪರಿಶೀಲನೆಗೆ ಒಳಪಡಿಸಿದ್ದು, ಆರೋಪಿಗಳಾದ ಪ್ರತಿಮ್ ಮುಖರ್ಜಿ ಮತ್ತು ಜೈಬ್ ಅಹ್ಮದ್ ಅವರ ಮೊಬೈಲ್‌ನಲ್ಲಿ 1 ನಿಮಿಷ 50 ಸೆಕೆಂಡ್‌ಗಳ ವಿಡಿಯೊ ಪತ್ತೆಯಾಗಿದೆ ಎಂದೂ ಅವರು ಹೇಳಿದ್ದಾರೆ.

ಆ ವಿಡಿಯೊವನ್ನು ಹಂಚಿಕೊಳ್ಳಲಾಗಿದೆಯೇ ಅಥವಾ ಅಳಿಸಲಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.