ADVERTISEMENT

ಕುವೈತ್‌ ಬ್ಯಾಂಕ್‌ನಿಂದ ₹700 ಕೋಟಿ ಸಾಲ ಪಡೆದು ಪರಾರಿಯಾದ ಕೇರಳದ ನರ್ಸ್‌ಗಳು!

ಪಿಟಿಐ
Published 10 ಡಿಸೆಂಬರ್ 2024, 12:47 IST
Last Updated 10 ಡಿಸೆಂಬರ್ 2024, 12:47 IST
<div class="paragraphs"><p>ನರ್ಸ್‌ಗಳು</p></div>

ನರ್ಸ್‌ಗಳು

   

ತಿರುವನಂತಪುರ: ಕುವೈತ್ ಬ್ಯಾಂಕ್‌ವೊಂದರಲ್ಲಿ ₹700 ಕೋಟಿಗೂ ಹೆಚ್ಚು ಸಾಲ ಪಡೆದು ಮರುಪಾವತಿ ಮಾಡದೆ ವಂಚಿಸಿದ ಆರೋಪದಡಿ ಕೇರಳದ ನರ್ಸ್‌ಗಳು ಸೇರಿದಂತೆ 1,400ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪ ಎದುರಿಸುತ್ತಿರುವವರಲ್ಲಿ ಬಹುತೇಕರು ಶುಶ್ರೂಷಕಿಯರು ಎಂಬುದು ವಿಶೇಷ. ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪಡೆದ ₹700 ಕೋಟಿಗೂ ಹೆಚ್ಚು ಸಾಲ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ADVERTISEMENT

ಬಹುತೇಕ ಸಾಲಗಾರರು ಕುವೈತ್‌ನಿಂದ ತಾಯ್ನಾಡಿಗೆ (ಕೇರಳ) ವಾಪಸ್‌ ಬಂದಿದ್ದಾರೆ. ಕೆಲವರು ಮತ್ತೆ ವಿದೇಶಗಳಿಗೂ ವಲಸೆ ಹೋಗಿದ್ದಾರೆ. ಇದರಿಂದಾಗಿ ಕುವೈತ್ ಬ್ಯಾಂಕ್ ಕೆಎಸ್‌ಸಿಪಿ (ಕುವೈತ್ ಸಾರ್ವಜನಿಕ ಷೇರುದಾರ ಕಂಪನಿ) ಇತ್ತೀಚೆಗೆ ಕೇರಳ ಪೊಲೀಸರಿಗೆ ದೂರು ನೀಡಿದ್ದು, ಅದರನ್ವಯ ರಾಜ್ಯದಲ್ಲಿ 10 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಎಸ್‌ಸಿಪಿ ಬ್ಯಾಂಕ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಮೊಹಮ್ಮದ್ ಅಬ್ದುಲ್ ವಸ್ಸಿ ಕಮ್ರಾನ್ ಅವರ ದೂರಿನ ಆಧಾರದ ಮೇಲೆ ಎರ್ನಾಕುಲಂ ಗ್ರಾಮಾಂತರದಲ್ಲಿ ಎಂಟು, ಎರ್ನಾಕುಲಂ ನಗರದಲ್ಲಿ ಒಂದು, ಕೊಟ್ಟಾಯಂನಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

406 ಮತ್ತು 420, 120-ಬಿ, 34 ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಹೆಚ್ಚಿನ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೊಂದು ‘ಸಾಮೂಹಿಕ ವಂಚನೆ’ ಪ್ರಕರಣವಾಗಿದೆ. 1,400ಕ್ಕೂ ಹೆಚ್ಚು ಜನರಿಂದ ಬ್ಯಾಂಕ್‌ಗೆ ₹700 ಕೋಟಿ ವಂಚಿಸಲಾಗಿದೆ. ಸಾಲಗಾರರು ತಲಾ ₹75 ಲಕ್ಷದಿಂದ ₹1 ಕೋಟಿವರೆಗೆ ಸಾಲ ಪಡೆದಿದ್ದಾರೆ ಎಂದು ವಕೀಲ ಥಾಮಸ್ ಮಾಹಿತಿ ನೀಡಿದ್ದಾರೆ.

ಕುವೈತ್‌ನ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ದಾದಿಯರು ಕೋವಿಡ್ ಸಂದರ್ಭದಲ್ಲಿ ಹೆಚ್ಚು ಸಾಲವನ್ನು ಪಡೆದಿದ್ದಾರೆ ಎಂದು ಥಾಮಸ್ ‘ಪಿಟಿಐ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.