ADVERTISEMENT

ಕೆರಗಳ ಪುನಶ್ಚೇತನ: ಬೆಂಗಳೂರಿನ ಟೆಕಿ ಕಪಿಲ್‌ ಶರ್ಮಾರನ್ನು ಹೊಗಳಿದ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 16:14 IST
Last Updated 26 ಅಕ್ಟೋಬರ್ 2025, 16:14 IST
ಕಪಿಲ್‌ ಶರ್ಮಾ
ಕಪಿಲ್‌ ಶರ್ಮಾ   

ನವದೆಹಲಿ: ಕೆರಗಳ ಪುನಶ್ಚೇತನಗೊಳಿಸುವ ಕೆಲಸ ಮಾಡುತ್ತಿರುವ ಬೆಂಗಳೂರಿನ ಐಟಿ ಉದ್ಯೋಗಿ ಕಪಿಲ್‌ ಶರ್ಮಾ ಅವರ ಕುರಿತು ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದಾರೆ. ಅವರ ‘ಸೇಟ್ರೀಸ್‌’ ಎಂಬ ಸಂಸ್ಥೆಯ ಬಗ್ಗೆಯೂ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

‘ಎಂಜಿನಿಯರ್‌ ಕಪಿಲ್‌ ಶರ್ಮಾ ಅವರ ಬೆಂಗಳೂರಿನಲ್ಲಿ ಗಮನಾರ್ಹವಾಗಿರುವ ಕಾರ್ಯ ಸಾಧಿಸಿದ್ದಾರೆ. ಬೆಂಗಳೂರನ್ನು ಕೆರೆಗಳ ನಗರ ಎನ್ನಲಾಗುತ್ತದೆ. ಇಲ್ಲಿನ ಕೆರೆಗಳಿಗೆ ಮರುಹುಟ್ಟು ನೀಡುವ ಅಭಿಯಾನವನ್ನೇ ಕಪಿಲ್‌ ಅವರು ಆರಂಭಿಸಿದ್ದಾರೆ. ಕಪಿಲ್‌ ಅವರ ತಂಡವು ನಗರದ 40 ಬಾವಿಗಳು, 6 ಕೆರೆಗಳನ್ನು ‍ಪುನರುಜ್ಜೀವನಗೊಳಿಸಿದ್ದಾರೆ. ಇದರಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಈ ಅಭಿಯಾನದಲ್ಲಿ ಉದ್ಯಮಿಗಳನ್ನೂ ಸ್ಥಳೀಯರನ್ನೂ ಸೇರಿಸಿಕೊಂಡಿದ್ದಾರೆ’ ಎಂದು ‍ಪ್ರಧಾನಿ ಮೋದಿ ಹೇಳಿದರು. 

ಶರ್ಮಾ ಅವರ ‘ಸೇಟ್ರೀಸ್‌’ ಎಂಬ ಸರ್ಕಾರೇತರ ಸಂಸ್ಥೆಯ ಕುರಿತೂ ಪ್ರಧಾನಿ ಅವರು ಪ್ರಸ್ತಾಪಿಸಿದರು. ತಾನು 50 ಲಕ್ಷ ಸಸಿಗಳನ್ನು ನೆಟ್ಟಿರುವುದಾಗಿ ಮತ್ತು ದೇಶದಾದ್ಯಂತ ಸುಮಾರು 50 ಕೆರೆಗಳನ್ನು ಪುನರುಜ್ಜೀವನಗೊಳಿಸಿರುವುದಾಗಿ ಈ ಸಂಸ್ಥೆ ಹೇಳಿಕೊಂಡಿದೆ.

ADVERTISEMENT

‘ವಂದೇ ಮಾತರಂ’ ಗೀತೆಗೆ 150 ವರ್ಷ

* ಬಂಕಿಮ್‌ ಚಂದ್ರ ಚಟ್ಟೋಪಾದ್ಯಾಯ ಅವರು ಬರೆದ ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬುತ್ತಿದೆ. ಈ ಗೀತೆಯು ದೇಶವನ್ನು ಅತ್ಯದ್ಬುತವಾಗಿ ಚಿತ್ರಿಸಿದೆ. ಈ ಗೀತೆಯ ಮೌಲ್ಯಗಳನ್ನು ನಾವು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಇದಕ್ಕಾಗಿ ದೇಶದಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.  

* ಬಿಎಸ್‌ಎಫ್‌ ಮತ್ತು ಸಿಆರ್‌ಪಿಎಫ್‌ನಲ್ಲಿ ಮುಧೋಳ ತಳಿಯ ಶ್ವಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗುತ್ತಿರುವುದರ ಬಗ್ಗೆ ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದಾರೆ.

* ಆಪರೇಷನ್‌ ಸಿಂಧೂರದ ಯಶಸ್ಸು ಹಾಗೂ ನಕ್ಸಲರ ಭಯ ಕಡಿಮೆಯಾಗಿರುವುದರಿಂದ ಈ ಬಾರಿ ದೇಶದಲ್ಲಿ ಜನರು ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.

* ನಮ್ಮ ಬುಡಕಟ್ಟು ಸಮುದಾಯಗಳಲ್ಲಿ ಭಗವಾನ್‌ ಬಿರ್ಸಾ ಮುಂಡಾ ಮತ್ತು ಕೋಮರಾಮ್‌ ಭೀಮ್‌ ಅವರಂತೆಯೇ ಹಲವಾರು ಶ್ರೇಷ್ಠ ಸಾಧಕರು ಆಗಿ ಹೋಗಿದ್ದಾರೆ. ಈ ಎಲ್ಲ ಬಗ್ಗೆಯೂ ನೀವು ಖಂಡಿತವಾಗಿಯೂ ಓದಲೇಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.