ADVERTISEMENT

ಮೋದಿ ಸರ್ಕಾರದ ನಿರ್ಲಕ್ಷ್ಯ; ಭರ್ತಿಯಾಗದ 30 ಲಕ್ಷ ಸರ್ಕಾರಿ ಉದ್ಯೋಗಗಳು: ಖರ್ಗೆ

ಏಜೆನ್ಸೀಸ್
Published 2 ಫೆಬ್ರುವರಿ 2024, 16:12 IST
Last Updated 2 ಫೆಬ್ರುವರಿ 2024, 16:12 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

ಪಿಟಿಐ ಚಿತ್ರ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿರುದ್ಯೋಗವನ್ನು ಕಡೆಗಣಿಸಿದೆ. ಸರ್ಕಾರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಬಿಜೆಪಿಗೆ ಇದರ ಪರಿವೆಯೇ ಇಲ್ಲ’ ಎಂದು ರಾಜ್ಯಸಭಾ ವಿರೋಧ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ADVERTISEMENT

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸಿ ಮಾತನಾಡಿದ ಅವರು, ‘ಸರ್ಕಾರಿ ಸ್ವಾಮ್ಯ ಸಂಸ್ಥೆಗಳನ್ನು ಮುಗಿಸುತ್ತಿದ್ದೀರಿ. ಆರ್ಥಿಕವಾಗಿ ದುರ್ಬಲರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸರ್ಕಾರಿ ಸಂಸ್ಥೆಗಳೇ ಪ್ರಮುಖ ಆಧಾರ’ ಎಂದಿದ್ದಾರೆ. 

’ಏಮ್ಸ್‌ನಲ್ಲಿ ಶೇ 41ರಷ್ಟು ಹುದ್ದೆಗಳು ಖಾಲಿ ಇವೆ. ಆಸ್ಪತ್ರೆಗಳನ್ನು ಕಟ್ಟಿಸಿದ್ದೇವೆ ಎಂದೆನ್ನುವ ಸರ್ಕಾರಕ್ಕೆ, ಅಲ್ಲಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎನ್ನುವುದು ಏಕೆ ಮುಖ್ಯವಾಗುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ.

‘ವಾಯುಸೇನೆ ಮತ್ತು ನೌಕಾಪಡೆಯಲ್ಲಿ ಅಗ್ನಿಪಥ ಯೋಜನೆ ಕುರಿತು ಯಾರನ್ನೂ ಸಂಪರ್ಕಿಸದೇ ಪ್ರಧಾನಿ ಮೋದಿ ನಿರ್ಣಯ ಕೈಗೊಂಡರು. ಜನರಲ್ ಎಂ.ಎಂ.ನರವಣೆ ಅವರ ಪ್ರಕಾರ ಅಗ್ನಿಪಥ ಯೋಜನೆಗೆ ಶೇ 75ರಷ್ಟು ಜನರನ್ನು ತೆಗೆದುಕೊಂಡು ಶೇ 25ರಷ್ಟು ಜನರನ್ನು ಬಿಡುಗಡೆಗೊಳಿಸಲಾಗುವುದು ಎಂದಿದ್ದರು. ಆದರೆ ಅದು ಈಗ ತಲೆಕೆಳಗಾಗಿದೆ’ ಎಂದು ಖರ್ಗೆ ಹೇಳಿದ್ದಾರೆ.

‘ಟೊಮೆಟೊ, ಈರುಳ್ಳಿ, ಹಾಲು, ಹಿಟ್ಟು, ಅಕ್ಕಿ, ಬೇಳೆಕಾಳುಗಳ ಬೆಲೆ ದ್ವಿಗುಣಗೊಂಡಿದೆ. ಆದರೆ ಮೋದಿ ಸರ್ಕಾರ ಎಂದೂ ಬೆಲೆ ಏರಿಕೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಬಗ್ಗೆ ಮೋದಿ ಮಾತನಾಡುತ್ತಾರೆ. ಆದರೆ ಇಂದು ರೈತರ ವಾರ್ಷಿಕ ಆದಾಯ ಶೇ 1.5ರಷ್ಟು ಕುಸಿದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.