
ಲಲಿತ್ ಮೋದಿ
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ತಾವು ಪೋಸ್ಟ್ ಮಾಡಿದ್ದ ವಿಡಿಯೊವೊಂದರ ಸಂಬಂಧ ಐಪಿಎಲ್ ರೂವಾರಿ ಲಲಿತ್ ಮೋದಿ ಅವರು ಭಾರತ ಸರ್ಕಾರದ ಕ್ಷಮೆ ಕೇಳಿದ್ದಾರೆ. ಅಲ್ಲದೇ ದೇಶದ ಬಗ್ಗೆ ತನಗೆ ಅಪಾರ ಗೌರವವಿದೆ ಎಂದಿದ್ದಾರೆ.
ಉದ್ಯಮಿ ವಿಜಯ್ ಮಲ್ಯ ಅವರ 70ನೇ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಅವರೊಂದಿಗಿದ್ದ ವಿಡಿಯೊವನ್ನು ಲಲಿತ್ ಪೋಸ್ಟ್ ಮಾಡಿದ್ದರು. ‘ನಾವಿಬ್ಬರು ದೇಶಭ್ರಷ್ಟರು, ಭಾರತದ ಎರಡು ಬಲುದೊಡ್ಡ ದೇಶಭ್ರಷ್ಟರು’ ಎಂದು ಲಲಿತ್ ಅವರು ವಿಡಿಯೊದಲ್ಲಿ ವ್ಯಂಗ್ಯವಾಗಿ ಹೇಳಿದ್ದರು. ಆ ಬಳಿಕ ವಿಡಿಯೊ ಅಳಿಸಿ ಹಾಕಿದ್ದರು.
ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಲಲಿತ್ ಮೋದಿ, ನಾನು ಯಾರದ್ದಾದರೂ, ಅದರಲ್ಲೂ ವಿಶೇಷವಾಗಿ ಭಾರತ ಸರ್ಕಾರದ ಭಾವನೆಗಳನ್ನು ನೋಯಿಸಿದ್ದರೆ ಕ್ಷಮೆ ಯಾಚಿಸುತ್ತೇನೆ. ಭಾರತ ಸರ್ಕಾರದ ಬಗ್ಗೆ ಅಪಾರ ಗೌರವ ಇದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇತರರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಹೊಂದಿರಲಿಲ್ಲ. ಮತ್ತೊಮ್ಮೆ ಕ್ಷಮೆಯಾಚಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ 70ನೇ ಹುಟ್ಟುಹಬ್ಬದ ಪಾರ್ಟಿ ಆಚರಿಸುತ್ತಿರುವ ವಿಡಿಯೊವನ್ನು ಲಲಿತ್ ಮೋದಿ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. 'ಭಾರತದಿಂದ ಪರಾರಿಯಾದವರು' ಎಂದು ಅವರು ಬರೆದುಕೊಂಡಿದ್ದರು.
'ಭಾರತದಲ್ಲಿ ಇಂಟರ್‌ನೆಟ್ ಮತ್ತೊಮ್ಮೆ ಬ್ರೇಕ್ ಮಾಡೋಣ. ನಾವಿಬ್ಬರು ಭಾರತದಿಂದ ಪರಾರಿಯಾಗಿದ್ದೇವೆ. ನನ್ನ ಸ್ನೇಹಿತನಿಗೆ ಹುಟ್ಟಹಬ್ಬದ ಶುಭಾಶಯಗಳು' ಎಂದು ಲಲಿತ್ ಮೋದಿ ವಿಡಿಯೊ ಪೋಸ್ಟ್ ಮಾಡಿದ್ದರು. ಡಿಸೆಂಬರ್ 18ರಂದು ಮಲ್ಯ 70ನೇ ವರ್ಷಕ್ಕೆ ಕಾಲಿರಿಸಿದ್ದರು.
ತೆರಿಗೆ ಹಾಗೂ ಹಣಕಾಸಿನ ಅವ್ಯವಹಾರ ಹಾಗೂ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ವಿಜಯ್ ಮಲ್ಯ ಹಾಗೂ ಲಲಿತ್ ಮೋದಿ ಎದುರಿಸುತ್ತಿದ್ದಾರೆ. ಭಾರತದಿಂದ ಪರಾರಿಯಾಗಿರುವ ಇಬ್ಬರು ಲಂಡನ್‌ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಅವ್ಯವಹಾರ ನಡೆಸಿದ ಆರೋಪ ಹೊತ್ತಿರುವ ಲಲಿತ್ ಮೋದಿ ಅವರು 2010ರಲ್ಲೇ ದೇಶವನ್ನು ತೊರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.