ADVERTISEMENT

ಲ್ಯಾಂಬೋರ್ಗಿನಿ ಕಾರು ಅಪಘಾತ ಪ್ರಕರಣ: ಬೆಳಗ್ಗೆ ಬಂಧನ, ಮಧ್ಯಾಹ್ನ ಬಿಡುಗಡೆ

ಪಿಟಿಐ
Published 12 ಫೆಬ್ರುವರಿ 2026, 15:24 IST
Last Updated 12 ಫೆಬ್ರುವರಿ 2026, 15:24 IST
ಕಾನ್ಪುರ ಸ್ಥಳೀಯ ನ್ಯಾಯಾಲಯದಿಂದ ಜಾಮೀನು ಮಂಜೂರಾದ ನಂತರ ವಕೀಲರ ಜೊತೆ ತೆರಳುತ್ತಿರುವ ಆರೋಪಿ ಶಿವಂ ಮಿಶ್ರಾ
ಕಾನ್ಪುರ ಸ್ಥಳೀಯ ನ್ಯಾಯಾಲಯದಿಂದ ಜಾಮೀನು ಮಂಜೂರಾದ ನಂತರ ವಕೀಲರ ಜೊತೆ ತೆರಳುತ್ತಿರುವ ಆರೋಪಿ ಶಿವಂ ಮಿಶ್ರಾ   

ಕಾನ್ಪುರ: ಲ್ಯಾಂಬೋರ್ಗಿನಿ ಕಾರು ಸರಣಿ ಅಪಘಾತ ಪ್ರಕರಣದಲ್ಲಿ ಗುರುವಾರ ಬೆಳಗ್ಗೆ ಕಾನ್ಪುರ ಪೊಲೀಸರಿಂದ ಬಂಧಿತನಾಗಿದ್ದ ತಂಬಾಕು ಉದ್ಯಮಿಯ ಪುತ್ರ ಶಿವಂ ಮಿಶ್ರಾ ಮಧ್ಯಾಹ್ನದ ವೇಳೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

ಉದ್ಯಮಿ ಕೆ.ಕೆ.ಮಿಶ್ರಾ ಅವರ ಪುತ್ರ 35 ವರ್ಷದ ಶಿವಂ ಮಿಶ್ರಾನನ್ನು ಕಾನ್ಪುರ ಪೊಲೀಸರು ಬಂಧಿಸಿ ಗುರುವಾರ ಬೆಳಗ್ಗೆ ಎಸಿಜೆಎಂ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು.

ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಕೋರಿದ್ದರು. ಆದರೆ ವಶಕ್ಕೆ ನೀಡುವ ಅಗತ್ಯ ಏನಿದೆ ಎಂದು ನ್ಯಾಯಾಲಯ ಪ್ರಶ್ನಿಸಿತು.  ವಾದ–ಪ್ರತಿವಾದ ಆಲಿಸಿ ₹20 ಸಾವಿರದ ಗ್ಯಾರಂಟಿ ಪತ್ರದೊಂದಿಗೆ ಜಾಮೀನು ಮಂಜೂರು ಮಾಡಿತು ಎಂದು ಸರ್ಕಾರಿ ಅಭಿಯೋಜಕ ದಿಲೀಪ್ ಅಶ್ವತಿ ತಿಳಿಸಿದ್ದಾರೆ.

ADVERTISEMENT

‘ಕಾನ್ಪುರ ಪೊಲೀಸರು ಶಿವಂ ಮಿಶ್ರಾನನ್ನು ಬೆಳಗ್ಗೆ ಔಪಚಾರಿಕವಾಗಿ ಬಂಧಿಸಿದ್ದರು. ಪ್ರಕರಣದ ಈ ಹಂತದಲ್ಲಿ ಶಿಕ್ಷೆ ಅಥವಾ ದಂಡ ವಿಧಿಸುವ ಅವಕಾಶಗಳು ಇರಲಿಲ್ಲ. ಹೀಗಾಗಿ ನ್ಯಾಯಾಲಯ ಜಾಮೀನು ನೀಡಿತು’ ಎಂದು ಮಿಶ್ರಾ ಪರ ವಕೀಲ ಅನಂತ್‌ ಶರ್ಮಾ ಹೇಳಿದರು.

ತನಿಖೆಗೆ ಸಹಕಾರ ನೀಡದ ಕಾರಣ ಶಿವಂನನ್ನು ಗುರುವಾರ ಬೆಳಗ್ಗೆ ನಗರದಲ್ಲೇ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದರು.

‘ತನಿಖಾಧಿಕಾರಿ ಪೊಲೀಸ್ ವಶಕ್ಕೆ ಪಡೆಯುವ ಅಗತ್ಯಕ್ಕೆ ಸರಿಯಾದ ಕಾರಣ ನೀಡಲಿಲ್ಲ. ಹೀಗಾಗಿ ನ್ಯಾಯಾಧೀಶರು ಪೊಲೀಸರ ಅರ್ಜಿ ವಜಾ ಮಾಡಿದರು’ ಎಂದು ಸರ್ಕಾರಿ ಅಭಿಯೋಜಕ ನರೇಂದ್ರ ಯಾದವ್‌ ಹೇಳಿದರು.

‘ತನಿಖೆಗೆ ಸಹಕಾರ ನೀಡುವೆ. ಸಾಕ್ಷಿಗೆ ಬೆದರಿಕೆ ಹಾಕುವುದಿಲ್ಲ. ಸಾಕ್ಷಿ ನಾಶಪಡಿಸುವುದಿಲ್ಲ’ ಎಂದು ಆರೋಪಿ ಶಿವಂ ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಿದರು.

ಘಟನೆ ವಿವರ:

ಭಾನುವಾರ ಶಿವಂ ಚಾಲನೆ ಮಾಡುತ್ತಿದ್ದರು ಎನ್ನಲಾದ ಲ್ಯಾಂಬೋರ್ಗಿನಿ ಕಾರು ಸರಣಿ ಅಪಘಾತ ಮಾಡಿದ್ದರಿಂದ ಆರು ಮಂದಿ ಗಾಯಗೊಂಡಿದ್ದರು. ಇ–ರಿಕ್ಷಾ ಚಾಲಕ ಮೊಹಮ್ಮದ್ ತೌಫಿಕ್‌ ದೂರು ಆಧರಿಸಿ ಕಾನ್ಪುರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

‘ನನ್ನ ಪುತ್ರ ಕಾರು ಚಾಲನೆ ಮಾಡುತ್ತಿರಲಿಲ್ಲ. ಅಪಘಾತಕ್ಕೀಡಾಗುವ ಮುನ್ನ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು’  ಎಂದು ಉದ್ಯಮಿ ಕೆ.ಕೆ.ಮಿಶ್ರಾ ಸಮರ್ಥಿಸಿಕೊಂಡಿದ್ದರು.

ಸಿ.ಸಿ.ಟಿ.ವಿ.ಕ್ಯಾಮೆರಾ ದೃಶ್ಯ ಅಧರಿಸಿ ಪೊಲೀಸರು ಮೊದಲು ಅಪರಿಚಿತ ಚಾಲಕನ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಅಪಘಾತದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು.

ಖಾಸಗಿ ಭದ್ರತಾ ಸಿಬ್ಬಂದಿಯೊಬ್ಬರು ಕಾರಿನಿಂದ ಹೊರಗೆಳೆಯುತ್ತಿದ್ದ ವ್ಯಕ್ತಿ ಶಿವಂ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆದಿತ್ತು. ಆನಂತರ ಶಿವಂ ಮಿಶ್ರಾ ಕಾರು ಚಾಲಕ ಎಂದು ಪೊಲೀಸರು ಉಲ್ಲೇಖ ಮಾಡಿದ್ದರು.

ಈ ಮಧ್ಯೆ ಕಾರು ಚಾಲನೆ ಮಾಡುತ್ತಿದುದು ನಾನೇ ಎಂದು ಬುಧವಾರ ಮೋಹನ್‌ ಲಾಲ್‌ ಎಂಬುವರು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಪೊಲೀಸ್ ವರದಿಯಲ್ಲಿ ಆತನ ಹೆಸರಿಲ್ಲದ ಕಾರಣ ನ್ಯಾಯಾಲಯ ಮನವಿ ತಿರಸ್ಕರಿಸಿತ್ತು.

ಶಿವಂ ಬಂಧನವು ಬಿಎನ್‌ಎಸ್ ಕುರಿತ ಸುಪ್ರೀಂ ಕೋರ್ಟ್‌ ಮಾರ್ಗಸೂಚಿಗಳಿಗೆ ವಿರುದ್ಧವಾಗಿತ್ತು. ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸರು ಕ್ರಮ ಕೈಗೊಂಡಿದ್ದರು.
– ನರೇಶ್ ಚಂದ್ರ ತ್ರಿಪಾಠಿ, ಶಿವಂ ಪರ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.