ADVERTISEMENT

ಬಾಂದ್ರಾ ಸೇತುವೆ ಮೇಲೆ 252 KM ವೇಗದ ಚಾಲನೆ:ಪೊಲೀಸರಿಂದ ‘ಲ್ಯಾಂಬೋರ್ಗಿನಿ’ ವಶಕ್ಕೆ

ಪಿಟಿಐ
Published 18 ಡಿಸೆಂಬರ್ 2025, 7:00 IST
Last Updated 18 ಡಿಸೆಂಬರ್ 2025, 7:00 IST
   

ಮುಂಬೈ: ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ಸೇತುವೆಯಲ್ಲಿ ವ್ಯಕ್ತಿಯೊಬ್ಬ ಗಂಟೆಗೆ 252 ಕಿ.ಮೀ ವೇಗದಲ್ಲಿ ಲ್ಯಾಂಬೋರ್ಗಿನಿ ಕಾರು ಚಲಾಯಿಸಿದ್ದಾನೆ. ಘಟನೆ ಸಂಬಂಧ ಕಾರನ್ನು ವಶಪಡಿಸಿಕೊಂಡಿದ್ದು, ಆರೋಪಿ ಪತ್ತೆಗೆ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 12ರಂದು ಈ ಘಟನೆ ನಡೆದಿದೆ. ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಘಟನೆ ಗಮನಕ್ಕೆ ಬಂದ ಕೂಡಲೇ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಷಾರಾಮಿ ಲ್ಯಾಂಬೋರ್ಗಿನಿ ಸ್ಪೋರ್ಟ್ಸ್ ಕಾರನ್ನು 252 ಕಿ.ಮೀ ವೇಗವಾಗಿ ಚಾಲನೆ ಮಾಡುವ ಮೂಲಕ ಇತರ ವಾಹನಗಳನ್ನು ಹಿಂದಿಕ್ಕುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಘಟನೆ ಬೆನ್ನಲ್ಲೇ ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅದೇ ಕಾರು ವೇಗದ ಮಿತಿಯನ್ನು ಹಲವು ಬಾರಿ ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಅವರು ವಿವರಿಸಿದ್ದಾರೆ.

ಬಾಂದ್ರಾ-ವರ್ಲಿ ಸೇತುವೆಯಲ್ಲಿ ಕಾರುಗಳ ವೇಗದ ಮಿತಿ ಗಂಟೆಗೆ 80 ಕಿ.ಮೀಗೆ ನಿದಗಿಪಡಿಸಲಾಗಿದೆ. ಆದರೆ, ಈ ಸ್ಪೋರ್ಟ್ಸ್ ಕಾರಿನ ಚಾಲಕ ವೇಗದ ಮಿತಿ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಘಟನೆ ಸಂಬಂಧ ಕಾರು ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 281 ಮತ್ತು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.