ADVERTISEMENT

ಹಣ ಅಕ್ರಮ ವರ್ಗಾವಣೆ: ಶಿವಸೇನಾ ಸಂಸದ ಸಂಜಯ್ ರಾವುತ್‌ ಮನೆಯಲ್ಲಿ ಇ.ಡಿ ಶೋಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2022, 5:22 IST
Last Updated 31 ಜುಲೈ 2022, 5:22 IST
ಶಿವಸೇನಾ ನಾಯಕ ಸಂಜಯ್ ರಾವುತ್ (ಪಿಟಿಐ ಚಿತ್ರ)
ಶಿವಸೇನಾ ನಾಯಕ ಸಂಜಯ್ ರಾವುತ್ (ಪಿಟಿಐ ಚಿತ್ರ)   

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವುತ್‌ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇಂದು (ಭಾನುವಾರ) ಬೆಳಗ್ಗೆ 7 ಗಂಟೆ ಸುಮಾರಿಗೆ ಸಂಜಯ್ ರಾವುತ್ ಅವರ ನಿವಾಸಕ್ಕೆ ತೆರಳಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ಟ್ವೀಟ್ ಮಾಡಿದೆ.

ರಾವುತ್, ಅವರ ಪತ್ನಿ ಹಾಗೂ ಸ್ನೇಹಿತ ಶಾಮೀಲಾಗಿದ್ದಾರೆ ಎನ್ನಲಾದ ‘ಪತ್ರಾ ಚಾಲ್‌’ ಭೂ ಹಗರಣಕ್ಕೆ ಸಂಬಂಧಿಸಿದ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅವರಿಗೆ ಜುಲೈ 20 ಮತ್ತು 27 ರಂದು ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ಸಮನ್ಸ್ ನೀಡಲಾಗಿತ್ತು.

ADVERTISEMENT

ಇ.ಡಿ ಸೂಚಿಸಿದ ದಿನಾಂಕದಂದು ರಾಜ್ಯಸಭಾ ಸಂಸದರಿಗೆ ಹಾಜರಾಗಲು ಸಾಧ್ಯವಿಲ್ಲ ಎಂದು ರಾವುತ್ ಪರವಾಗಿ ವಕೀಲರು ಲಿಖಿತ ಉತ್ತರದಲ್ಲಿ ತಿಳಿಸಿದ್ದರು. ಇ.ಡಿ ಅಧಿಕಾರಿಗಳನ್ನು ಭೇಟಿಯಾದ ವಕೀಲರು ಈ ವಿಷಯ ತಿಳಿಸಿದ್ದು, ಆಗಸ್ಟ್ ಮೊದಲ ವಾರದ ಬಳಿಕ ಸಮಯ ನೀಡುವಂತೆ ವಿನಂತಿಸಿದ್ದರು.

ಜುಲೈ 1ರಂದು ರಾವುತ್ ಅವರನ್ನು ತನಿಖೆಗೊಳಪಡಿಸಲಾಗಿತ್ತು. ಅಲ್ಲದೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್ ಅಡಿಯಲ್ಲಿ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

ಅಂದು ಪ್ರತಿಕ್ರಿಯಿಸಿದ್ದ ರಾವುತ್, ನಾನು ಸಂಪೂರ್ಣ ಸಹಕಾರ ನೀಡಿದ್ದೇನೆ. ಅಲ್ಲದೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮತ್ತೆ ಕರೆ ಮಾಡಿದರೆ ಹಾಜರಾಗುತ್ತೇನೆ. ಯಾವುದೇ ಭಯ ನನಗಿಲ್ಲ. ಜೀವನದಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.