ADVERTISEMENT

ಕೇರಳ ವಿಧಾನಸಭೆ ಚುನಾವಣೆ| ಎಲ್‌ಡಿಎಫ್‌-ಯುಡಿಎಫ್‌ ನಡುವೆ 'ಉಚಿತ ಅಕ್ಕಿ' ಕಿತ್ತಾಟ

ಪಿಟಿಐ
Published 28 ಮಾರ್ಚ್ 2021, 9:19 IST
Last Updated 28 ಮಾರ್ಚ್ 2021, 9:19 IST
ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌   

ಕೋಯಿಕ್ಕೋಡ್‌ (ಕೇರಳ): ಕೇರಳದ ಆಡಳಿತಾರೂಢ ಎಲ್‌ಡಿಎಫ್‌ ವಿಧಾನಸಭಾ ಚುನಾವಣೆಗಿಂತ ಮುನ್ನ ಹಬ್ಬದ ಹೆಸರಿನಲ್ಲಿ ಜನರಿಗೆ ಉಚಿತ ಅಕ್ಕಿ ವಿತರಿಸುತ್ತಿದೆ. ಈ ಮೂಲಕ ಪಕ್ಷವು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದೆ.

ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು,‘ಕಾಂಗ್ರೆಸ್‌–ಯುಡಿಎಫ್‌, ಚುನಾವಣಾ ಆಯೋಗವನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಜನರ ಪಡಿತರ ಅಕ್ಕಿ ಮತ್ತು ಆಹಾರ ಕಿಟ್‌ ಅನ್ನು ತಡೆಯುವ ಮೂಲಕ ವಿರೋಧ ಪಕ್ಷ ಕೆಟ್ಟ ರಾಜಕೀಯ ಮಾಡುತ್ತಿದೆ ’ ಎಂದು ದೂರಿದ್ದಾರೆ.

‘ಎಲ್‌ಡಿಎಫ್‌ ಮತ್ತೆ ಅಧಿಕಾರಕ್ಕೆ ಮರಳಲಿದೆ. ಕೇರಳವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಲು ಎಲ್‌ಡಿಎಫ್‌ ಬದ್ಧವಾಗಿದೆ. ಎಲ್‌ಡಿಎಫ್‌ ಆಡಳಿತದಲ್ಲಿ ಪ್ರತಿಯೊಬ್ಬ ಪ್ರಜೆಗೂ ಆಶ್ರಯ ಸಿಗಲಿದೆ’ ಎಂದು ಅವರು ಹೇಳಿದರು.

ADVERTISEMENT

‘ಆಡಳಿತರೂಢ ಪಕ್ಷ ಎಲ್‌ಡಿಎಫ್‌, ಜನರಿಗೆ ಹಬ್ಬದ ಹೆಸರಿನಲ್ಲಿ ಉಚಿತ ಅಕ್ಕಿ ಮತ್ತು ಆಹಾರ ಕಿಟ್‌ ವಿತರಣೆ ಮಾಡುತ್ತಿದೆ. ಈ ಮೂಲಕ ಪಕ್ಷ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ನಾಯಕ ರಮೇಶ್‌ ಚೆನ್ನಿತ್ತಲ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಏಪ್ರಿಲ್‌ 6 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಬಳಿಕ ವಿಷು ಹಬ್ಬದ ಆಹಾರ ಕಿಟ್‌ ಮತ್ತು ಪಿಂಚಣಿಯನ್ನು ನೀಡಬೇಕು ಎಂದು ಅವರು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಆಯೋಗವು ಉಚಿತ ಅಕ್ಕಿ ವಿತರಣೆಯನ್ನು ನಿಲ್ಲಿಸುವಂತೆ ಸೂಚಿಸಿತ್ತು.

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಪಿಣರಾಯಿ ವಿಜಯನ್‌,‘ ಈ ಸಾಂಕ್ರಾಮಿಕ ಸಂದರ್ಭದಲ್ಲಿ ಜನರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಉಚಿತವಾಗಿ ಅಕ್ಕಿ ವಿತರಣೆ ಮಾಡಲು ಮುಂದಾಗಿದ್ದೆವು. ಮುಂದಿನ ದಿನಗಳಲ್ಲಿ ನಾವು ರಾಜ್ಯದಲ್ಲಿ ‘ಜನಕೀಯಾ’ ಹೋಟೆಲ್‌ಗಳನ್ನು ತೆರೆಯಲಿದ್ದೇವೆ’ ಎಂದರು.

ಆಡಳಿತ ಪಕ್ಷದ ಈ ನಡೆಯ ಹಿಂದೆ ಬೇರೆಯೇ ಹಿತಾಸಕ್ತಿ ಇದೆ ಎಂದು ಬಿಜೆಪಿಯೂ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.