ADVERTISEMENT

ಎಎಪಿ ಕಾರ್ಯಕರ್ತರ ವಿರುದ್ಧ ಕ್ರಮಕ್ಕೆ ಎಲ್‌.ಜಿ. ಸೂಚನೆ

ಬಿಜೆಪಿ ವಿರುದ್ಧ ಹರಿಹಾಯ್ದ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2024, 0:03 IST
Last Updated 29 ಡಿಸೆಂಬರ್ 2024, 0:03 IST
Aam Aadmi Party logo (Wikimedia commons)
Aam Aadmi Party logo (Wikimedia commons)   

ನವದೆಹಲಿ: ಎಎಪಿ ಪಕ್ಷವು ಹಿರಿಯ ನಾಗರಿಕರಿಗೆ ಹಾಗೂ ಮಹಿಳೆಯರಿಗೆ ಘೋಷಿಸಿರುವ ಚುನಾವಣಾ ಭರವಸೆಗಳಿಂದ ದೆಹಲಿ ಸರ್ಕಾರದ ಎರಡು ಇಲಾಖೆಗಳು ಅಂತರ ಕಾಯ್ದುಕೊಂಡ ಒಂದು ವಾರದ ನಂತರ, ಸೌಲಭ್ಯಗಳಿಗೆ ನೋಂದಣಿ ಮಾಡಿಸಿಕೊಳ್ಳುವ ‘ವಂಚನೆಯ ಉದ್ದೇಶದ’ ಅಭಿಯಾನ ನಡೆಸುತ್ತಿರುವ ಎಎಪಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಸೂಚಿಸಿದ್ದಾರೆ.

ದೆಹಲಿ ವಿಧಾನಸಭೆಗೆ ಚುನಾವಣೆ ಹತ್ತಿರವಾಗಿರುವ ಈ ಸಂದರ್ಭದಲ್ಲಿ ಲೆಫ್ಟಿನೆಂಟ್ ಗವರ್ನರ್ ನೀಡಿರುವ ಈ ಸೂಚನೆಯು ಇನ್ನೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಹೇಳಲಾಗಿದೆ.

ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಎಎಪಿ ನಡೆಸುವ ಚಟುವಟಿಕೆಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ಕೂಡ ಸಕ್ಸೇನಾ ಅವರು ದೆಹಲಿಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಇದಕ್ಕೆ ಮಾತಿನ ತಿರುಗೇಟು ನೀಡಿರುವ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು, ಮತಗಳಿಗಾಗಿ ಹಣ ಹಂಚುತ್ತಿದ್ದ ಎನ್ನಲಾದ ಬಿಜೆಪಿ ನಾಯಕರೊಬ್ಬರ ವಿರುದ್ಧ ಸಕ್ಸೇನಾ ಅವರು ಏಕೆ ಕ್ರಮ ಜರುಗಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಎಎಪಿಯ ಜನಪರ ಕ್ರಮಗಳಿಗೆ ಅಡ್ಡಿ ಮಾಡಲು ಬಿಜೆಪಿಯು ತೀರ್ಮಾನಿಸಿಬಿಟ್ಟಿದೆ ಎಂದು ಕೇಜ್ರಿವಾಲ್ ದೂರಿದ್ದಾರೆ.

ADVERTISEMENT

ಮಹಿಳೆಯರಿಗೆ ಪ್ರತಿ ತಿಂಗಳಿಗೆ ₹1,000 ನೀಡುವ ಯೋಜನೆಗೆ ನೋಂದಣಿ ಮಾಡಿಸುವ ಹೆಸರಿನಲ್ಲಿ ಎಎಪಿ ಕಾರ್ಯಕರ್ತರು ಮಹಿಳೆಯರ ವಿವರಗಳನ್ನು ಹಾಗೂ ಸಹಿಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ಸಿನ ಸಂದೀಪ್ ದೀಕ್ಷಿತ್ ನೀಡಿರುವ ದೂರು ಆಧರಿಸಿ ಸಕ್ಸೇನಾ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಮೊತ್ತವನ್ನು ಚುನಾವಣೆಯ ನಂತರ ₹2,100ಕ್ಕೆ ಹೆಚ್ಚಿಸುವುದಾಗಿ ಎಎಪಿ ಭರವಸೆ ನೀಡಿದೆ.

ಸರ್ಕಾರದ ಭಾಗವಾಗಿಲ್ಲದ ವ್ಯಕ್ತಿಗಳು ಜನರ ವೈಯಕ್ತಿಕ ಮಾಹಿತಿ ಪಡೆದುಕೊಂಡಿರುವುದರ ಬಗ್ಗೆ ವಿಭಾಗೀಯ ಆಯುಕ್ತರಿಂದ ವಿಚಾರಣೆ ನಡೆಸಬೇಕು ಎಂಬುದು ಲೆಫ್ಟಿನೆಂಟ್ ಗವರ್ನರ್ ಅವರ ಬಯಕೆ ಎಂದು ಅವರ ಪ್ರಧಾನ ಕಾರ್ಯದರ್ಶಿ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.

ಸವಲತ್ತುಗಳನ್ನು ಕೊಡುವ ಹೆಸರಿನಲ್ಲಿ ಸಾರ್ವಜನಿಕರ ಖಾಸಗಿತನವನ್ನು ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸ್‌ ಆಯುಕ್ತರಿಗೆ ಸೂಚಿಸಲಾಗಿದೆ.

‘ಉಚಿತ ವಿದ್ಯುತ್, ಉಚಿತ ನೀರು, ಉಚಿತ ಚಿಕಿತ್ಸೆಯನ್ನು ನಿಲ್ಲಿಸುವ ಉದ್ದೇಶ ಬಿಜೆಪಿಗೆ ಇದೆ. ನೀವು ತಪ್ಪಾಗಿ ಬಿಜೆಪಿಗೆ ಮತ ಚಲಾಯಿಸಿದರೆ ನೀವು ದೆಹಲಿ ತೊರೆಯಬೇಕಾಗುತ್ತೆ. ದೆಹಲಿಯು ಬದುಕಲು ಯೋಗ್ಯವಾಗಿ ಉಳಿಯುವುದಿಲ್ಲ’ ಎಂದು ಕೇಜ್ರಿವಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.

ಹೆಸರು ನೋಂದಾಯಿಸಲು ಆರಂಭಿಸಿರುವ ಶಿಬಿರಗಳನ್ನು ಹೇಗಾದರೂ ಮಾಡಿ ಮುಚ್ಚಿಸಬೇಕು ಎಂಬುದು ಬಿಜೆಪಿಯ ಉದ್ದೇಶ ಎಂದು ದೂರಿದ್ದಾರೆ.

ಬಿಜೆಪಿಯ ಪರಿಸ್ಥಿತಿ ಹೇಗಿದೆಯೆಂದರೆ ಅವರು ತಮ್ಮನ್ನು ರಕ್ಷಿಸಿ ಎಂದು ಕಾಂಗ್ರೆಸ್ಸಿನ ಮುಂದೆ ಗೋಗರೆಯುತ್ತಿದ್ದಾರೆ
ಅರವಿಂದ ಕೇಜ್ರಿವಾಲ್ ಎಎಪಿ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.