ADVERTISEMENT

ಗುಜರಾತ್‌ | ಮೂರು ಸಿಂಹದ ಮರಿಗಳ ಹಠಾತ್ ಸಾವು: ಹೆಚ್ಚಿದ ಆತಂಕ

ಪಿಟಿಐ
Published 31 ಜುಲೈ 2025, 5:49 IST
Last Updated 31 ಜುಲೈ 2025, 5:49 IST
<div class="paragraphs"><p>ಸಿಂಹಗಳು</p></div>

ಸಿಂಹಗಳು

   

Credit: iStock Photo

ಅಹಮದಾಬಾದ್‌: ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಮೂರು ಸಿಂಹದ ಮರಿಗಳು ಮೃತಪಟ್ಟಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಮೂರು ಸಿಂಹಗಳು ಮತ್ತು ಆರು ಮರಿಗಳನ್ನು ಪ್ರತ್ಯೇಕಿಸಿ ಅವುಗಳ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಜುಲೈ 28ರಂದು ಎರಡು ಮತ್ತು ಜುಲೈ 30ರಂದು ಒಂದು ಸಿಂಹದ ಮರಿ ಮೃತಪಟ್ಟಿದೆ ಎಂದು ಗುಜರಾತ್ ಅರಣ್ಯ ಸಚಿವ ಮುಲುಭಾಯ್ ಬೇರಾ ತಿಳಿಸಿದ್ದಾರೆ.

‘ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಹಾಯ ಮಾಡಲು ಜುನಾಗಢದ ಪಶುವೈದ್ಯಕೀಯ ವೈದ್ಯರನ್ನು ತಕ್ಷಣ ಸ್ಥಳಕ್ಕೆ ಕಳುಹಿಸಲಾಗಿದೆ. ನಮ್ಮ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಮೂರು ಸಿಂಹಗಳು ಮತ್ತು ಆರು ಮರಿಗಳನ್ನು ಪ್ರತ್ಯೇಕಿಸಿದ್ದೇವೆ. ಅವುಗಳ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಸಿಂಹದ ಮರಿಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ’ ಎಂದು ಬೇರಾ ಹೇಳಿದ್ದಾರೆ.

‘ಒಂದು ವಾರದ ಹಿಂದೆ ಅಮ್ರೇಲಿಯ ಜಾಫ್ರಾಬಾದ್ ತಾಲ್ಲೂಕಿನ ಕಗ್ವಾದರ್ ಗ್ರಾಮದ ಬಳಿ ತಾಯಿ ಸಿಂಹ ಬಿಟ್ಟು ಹೋಗಿದ್ದ ಎರಡು ಮರಿಗಳನ್ನು ರಕ್ಷಣೆ ಮಾಡಲಾಗಿತ್ತು. ಜತೆಗೆ, ಮರಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗಿತ್ತು. ಆದಾಗ್ಯೂ, ಅವು ಎರಡು ದಿನಗಳ ಹಿಂದೆ ದೌರ್ಬಲ್ಯ ಮತ್ತು ನ್ಯುಮೋನಿಯಾದಿಂದ ಮೃತಪಟ್ಟಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶದಲ್ಲಿ ಓಡಾಡುವ ಇತರ ಸಿಂಹಗಳು ಮತ್ತು ಮರಿಗಳ ಆರೋಗ್ಯ ತಪಾಸಣೆ ನಡೆಸಲು ನಿರ್ಧರಿಸಿದ್ದೇವೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಶೆಟ್ರುಂಜಿ ವನ್ಯಜೀವಿ ವಿಭಾಗ) ಧನಂಜಯ್ ಸಾಧು ತಿಳಿಸಿದ್ದಾರೆ.

2018ರಲ್ಲಿ ಗುಜರಾತ್‌ನಲ್ಲಿ ಒಂದು ತಿಂಗಳೊಳಗೆ ಕೆನೈನ್ ಡಿಸ್ಟೆಂಪರ್ (ಸಿಡಿವಿ) ಸೋಂಕಿನಿಂದ 20ಕ್ಕೂ ಸಿಂಹಗಳು ಮೃತಪಟ್ಟಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.