ADVERTISEMENT

ಲಾಕ್‌ಡೌನ್‌ | ಇಂದಿನಿಂದ ಮದ್ಯ ಮಾರಾಟ: ಅಸ್ಸಾಂ, ಮೇಘಾಲಯ ಅಬಕಾರಿ ಇಲಾಖೆ ಆದೇಶ

ಏಜೆನ್ಸೀಸ್
Published 13 ಏಪ್ರಿಲ್ 2020, 6:11 IST
Last Updated 13 ಏಪ್ರಿಲ್ 2020, 6:11 IST
ಮದ್ಯ ಮಾರಾಟಕ್ಕೆ ಅವಕಾಶ
ಮದ್ಯ ಮಾರಾಟಕ್ಕೆ ಅವಕಾಶ   

ಗುವಾಹಟಿ: ಕೋವಿಡ್‌–19 ಸಾಂಕ್ರಾಮಿಕ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈ ನಡುವೆ ಅಸ್ಸಾಂ ಮತ್ತು ಮೇಘಾಲಯದ ಅಬಕಾರಿ ಇಲಾಖೆಗಳುಸೋಮವಾರದಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಿವೆ.

ಅಸ್ಸಾಂನಲ್ಲಿ ಮದ್ಯ ಮಾರಾಟದ ಅಂಗಡಿಗಳು, ಸಗಟು ಮಾರಾಟ ಕೇಂದ್ರಗಳು, ಮದ್ಯ ತಯಾರಿಕಾ ಘಟಕಗಳು ಹಾಗೂ ಬಾಟಲಿಂಗ್‌ ಘಟಕಗಳು ಇಂದಿನಿಂದ ನಿತ್ಯ ಏಳು ಗಂಟೆ ತೆರೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ಪಕ್ಕದ ಮೇಘಾಲಯದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೂ ರಿಟೇಲ್‌ ಮದ್ಯ ಮಾರಾಟ ಕೇಂದ್ರಗಳು, ಅಂಗಡಿಗಳು ಹಾಗೂ ಸಂಗ್ರಹ ಘಟಕಗಳು ಕಾರ್ಯನಿರ್ವಹಿಸಲಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಶುಚಿತ್ವ ಕಾಪಾಡುವುದಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

'ಅನುಮತಿ ನೀಡಿರುವ ದಿನಗಳಂದು ಮದ್ಯ ಮಾರಾಟ ಅಂಗಡಿಗಳು ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೂ ತೆರೆದಿರಲಿವೆ. ಅಂಗಡಿಗಳಲ್ಲಿ ಕನಿಷ್ಠ ಸಂಖ್ಯೆಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಬಾಟಲಿ, ನಗದು ಮುಟ್ಟುವಾಗ ಗ್ರಾಹಕರು ಹಾಗೂ ಸಿಬ್ಬಂದಿಗೆ ಹ್ಯಾಂಡ್‌ ಸ್ಯಾನಿಟೈಸರ್‌ ಪೂರೈಸಬೇಕು' ಎಂದು ಅಸ್ಸಾಂನ ಅಬಕಾರಿ ಇಲಾಖೆ ಆದೇಶಿಸಿದೆ.

ADVERTISEMENT

ಮದ್ಯ ಮಾರಾಟ ಅಂಗಡಿಗಳನ್ನು ಮತ್ತೆ ತೆರೆಯಲು ಅವಕಾಶ ನೀಡಿರುವ ಸರ್ಕಾರದ ಆದೇಶವನ್ನು ಮೇಘಾಲಯದ ಅಬಕಾರಿ ಇಲಾಖೆ ಆಯುಕ್ತರಾದ ಪ್ರವಿಣ್ ಬಕ್ಷಿ, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ತಿಳಿಸಿದ್ದಾರೆ.

ಮದ್ಯ ಮಾರಾಟ ಅಂಗಡಿಗಳನ್ನು ತೆರೆಯುವಂತೆ ಮೇಘಾಲಯ ಸರ್ಕಾರದ ಮೇಲೆ ಜನರಿಂದ ತೀವ್ರ ಒತ್ತಡವಿದೆ. ಬಿಜೆಪಿ ಸೇರಿದಂತೆ ಆಡಳಿತಾರೂಢ ಪಕ್ಷದ ಮೈತ್ರಿ ಪಕ್ಷಗಳು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಈ ವರೆಗೂ ಮೇಘಾಲಯದಲ್ಲಿಕೊರೊನಾ ವೈರಸ್‌ ಸೋಂಕು ಪ್ರಕರಣ ದಾಖಲಾಗಿಲ್ಲ. ಆದರೆ, ಅಸ್ಸಾಂನಲ್ಲಿ 29 ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ.

ಈ ಹಿಂದೆ ಮನೆಗಳಿಗೇ ಮದ್ಯ ಪೂರೈಕೆಮಾಡುವಂತೆ ವೈದ್ಯರ ಸಲಹೆಗಳನ್ನು ಸ್ವೀಕರಿಸಿದ್ದ ಕೇರಳ ಸರ್ಕಾರ, ಜನರಿಗೆ ಮದ್ಯ ಪೂರೈಕೆ ಮಾಡುವ ಆದೇಶ ಪ್ರಕಟಿಸಿತ್ತು. ಆದರೆ, ಕೇರಳ ಹೈಕೋರ್ಟ್‌ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ, ಅಸ್ಸಾಂ ಹಾಗೂ ಮೇಘಾಲಯದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವಂತೆ ಟ್ವೀಟ್‌ ಮೂಲಕ ಬೇಡಿಕೆ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.