ಪಾಕಿಸ್ತಾನ ಸೇನೆ ನಡೆಸಿದ ಶೆಲ್ ದಾಳಿಯಿಂದ ಪೂಂಚ್ ಜಿಲ್ಲೆಯ ಮೆಂಧಾರ್ ಗ್ರಾಮದ ಮನೆಗೆ ಹಾನಿಯಾಗಿರುವುದು
ಪಿಟಿಐ ಚಿತ್ರ
ಜಮ್ಮು/ಶ್ರೀನಗರ: ಪಾಕಿಸ್ತಾನ ಸೇನೆ ಜಮ್ಮು ಮತ್ತು ಕಾಶ್ಮೀರದ ನಾಲ್ಕು ವಲಯಗಳಲ್ಲಿರುವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಶೆಲ್ ದಾಳಿ ಮುಂದುವರಿಸಿದೆ. ಭಾರತೀಯ ಸೇನೆಯು ಅದಕ್ಕೆ ತಕ್ಕಂತೆ ಪ್ರತ್ಯುತ್ತರ ನೀಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಭಾಗವಾಗಿ ಭಾರತ ನಡೆಸಿದ ಕ್ಷಿಪಣಿ ದಾಳಿಯ ಬೆನ್ನಲ್ಲೇ, ಪಾಕ್ ಸೇನೆ ಜಮ್ಮು ಮತ್ತು ಕಾಶ್ಮೀರದ ಗ್ರಾಮಗಳನ್ನು ಗುರಿಯಾಗಿಸಿ ಫಿರಂಗಿ, ಶೆಲ್ ದಾಳಿ ನಡೆಸಿತ್ತು. ಬುಧವಾರಕ್ಕೆ ಹೋಲಿಸಿದರೆ, ಇಂದು ಗಡಿಯಾಚಿನ ಗುಂಡಿನ ದಾಳಿಯ ತೀವ್ರತೆ ಕಡಿಮೆಯಾಗಿದ್ದು, ನಾಲ್ಕು ವಲಯಗಳಲ್ಲಿ ಮಾತ್ರ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
'ಪಾಕಿಸ್ತಾನ ಸೇನೆಯು ಮೇ 7 ಮತ್ತು 8ರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಉರಿ ಮತ್ತು ಅಖ್ನೂರ್ ವಲಯಗಳಲ್ಲಿನ ಎಲ್‌ಒಸಿಯುದ್ದಕ್ಕೂ ಲಘು ಶಸ್ತ್ರಾಸ್ತ್ರಗಳು ಮತ್ತು ಫಿರಂಗಿಗಳನ್ನು ಬಳಸಿ ಅಪ್ರಚೋದಿತ ದಾಳಿ ನಡೆಸಿದೆ. ಭಾರತೀಯ ಸೇನೆ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಿದೆ' ಎಂದು ಜಮ್ಮುವಿನಲ್ಲಿರುವ ರಕ್ಷಣಾ ಇಲಾಖೆಯ ವಕ್ತಾರರು ಮಾಹಿತಿ ನೀಡಿದ್ದಾರೆ. ಹಾಗೆಯೇ, ಘರ್ಷಣೆಯಲ್ಲಿ ಯಾವುದೇ ಸಾವು–ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಎಂದಿದ್ದಾರೆ.
ಬುಧವಾರ ನಡೆದ ದಾಳಿಯಲ್ಲಿ ಅತಿಹೆಚ್ಚು ಹಾನಿ ಅನುಭವಿಸಿದ್ದ ಪೂಂಛ್ ವಲಯ ರಾತ್ರಿಯಿಡೀ ಶಾಂತವಾಗಿತ್ತು. ಘರ್ಷಣೆಯ ಭೀತಿಯಿಂದಾಗಿ ಗಡಿಯಲ್ಲಿನ ನೂರಾರು ನಿವಾಸಿಗಳು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದೂ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ಇತ್ತೀಚೆಗೆ ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ, ಭಾರತೀಯ ಸೇನೆ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ಬುಧವಾರ ಮುಂಜಾನೆ 'ಆಪರೇಷನ್ ಸಿಂಧೂರ' ಸೇನಾ ಕಾರ್ಯಾಚರಣೆ ನಡೆಸಿದೆ.
ಅದರ ಬೆನ್ನಲ್ಲೇ, ಪಾಕಿಸ್ತಾನದ ಸೇನಾ ಪಡೆಯು ಜಮ್ಮು–ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ಭಾಗಗಳಲ್ಲಿ ಬುಧವಾರ ತೀವ್ರ ಗುಂಡಿನದಾಳಿ ನಡೆಸಿತ್ತು. ಘಟನೆಯಲ್ಲಿ 4 ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ 15 ಮಂದಿ ಮೃತಪಟ್ಟಿದ್ದು, 57 ಮಂದಿ ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.