ADVERTISEMENT

ಮೈತ್ರಿಗಾಗಿ ‘ಕೈ’ಬಿಡದಂತೆ ಕಾಂಗ್ರೆಸ್‌ ಸಂಸದರ ಮನವಿ

ಸೋನಿಯಾ, ವೇಣುಗೋಪಾಲ್‌ ಬಳಿ ಅಹವಾಲು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 10:19 IST
Last Updated 24 ಏಪ್ರಿಲ್ 2019, 10:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲೋಕಸಭೆಗೆ 2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಗೆದ್ದು ಬಂದವರನ್ನು ಜೆಡಿಎಸ್‌ ಮೈತ್ರಿಯ ಕಾರಣ ಮುಂದಿರಿಸಿ ಕಡೆಗಣಿಸದೆ ‘ಕೈ’ ಹಿಡಿಯಬೇಕು ಎಂಬ ಅಹವಾಲನ್ನು ಕಾಂಗ್ರೆಸ್‌ನ ಸಂಸದರು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದ್ದಾರೆ.

ಕಳೆದ ಮಂಗಳವಾರ ಸಂಸತ್‌ ಭವನದಲ್ಲಿ ಸೋನಿಯಾ ಅವರನ್ನು ಭೇಟಿಯಾದ ಕಾಂಗ್ರೆಸ್‌ನ 9 ಜನ ಸಂಸದರು, ‘ಜೆಡಿಎಸ್‌ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಗೆದ್ದು ಬಂದವರಿಗೆ ಈ ಬಾರಿ ಮೈತ್ರಿಯಿಂದಾಗಿ ಟಿಕೆಟ್‌ ತಪ್ಪುವ ಮುನ್ಸೂಚನೆ ದೊರೆತಿದೆ. ಅಂಥ ಏಳು ಕ್ಷೇತ್ರಗಳನ್ನು ಹೊರತುಪಡಿಸಿ ಮಿಕ್ಕ ಕಡೆಗಳಲ್ಲೇ ಮಿತ್ರ ಪಕ್ಷಕ್ಕೆ ಸ್ಥಾನ ಹಂಚಿಕೆ ಮಾಡಬೇಕು’ ಎಂಬ ಬೇಡಿಕೆ ಇರಿಸಿದ್ದಾರೆ.

ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯಿಲಿ, ಕೋಲಾರದ ಕೆ.ಎಚ್‌. ಮುನಿಯಪ್ಪ, ತುಮಕೂರಿನ ಎಸ್‌.ಪಿ. ಮುದ್ದಹನುಮೇಗೌಡ, ಚಿತ್ರದುರ್ಗದ ಬಿ.ಎನ್‌. ಚಂದ್ರಪ್ಪ, ಚಾಮರಾಜನಗರದ ಆರ್‌.ಧ್ರುವನಾರಾಯಣ, ರಾಯಚೂ
ರಿನ ಬಿ.ವಿ. ನಾಯಕ್‌, ಬೆಂಗಳೂರು ಗ್ರಾಮಾಂತರದ ಡಿ.ಕೆ. ಸುರೇಶ ಈ ಬೇಡಿಕೆ ಇರಿಸಿದವರಲ್ಲಿ ಪ್ರಮುಖರು.

ADVERTISEMENT

ಇವರೊಂದಿಗೆ ಚಿಕ್ಕೋಡಿಯ ಪ್ರಕಾಶ್‌ ಹುಕ್ಕೇರಿ ಹಾಗೂ ಬಳ್ಳಾರಿಯ ವಿ.ಎಸ್‌. ಉಗ್ರಪ್ಪ ಅವರೂ ಸೋನಿಯಾ ಗಾಂಧಿ ಕೊಠಡಿಗೆ ತೆರಳಿದ್ದ ನಿಯೋಗದಲ್ಲಿದ್ದರು.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿತ್ರದುರ್ಗ ಕ್ಷೇತ್ರಗಳೂ ಸೇರಿದಂತೆ ರಾಜ್ಯದಲ್ಲಿ ಒಟ್ಟು 12 ಸ್ಥಾನಗಳಿಗೆ ಜೆಡಿಎಸ್‌ ಬೇಡಿಕೆ ಇರಿಸಿರುವ ವಿಷಯ ಗೊತ್ತಾಗಿದೆ. ಆದರೆ, ನರೇಂದ್ರ ಮೋದಿ ಅಲೆಯ ನಡುವೆಯೂ ಜಯಿಸಿರುವ ಕ್ಷೇತ್ರಗಳನ್ನು ಬಿಟ್ಟುಕೊಡುವುದು ಬೇಡ ಎಂದು ಈ ಸಂಸದರ ನಿಯೋಗವು ಮನವಿ ಮಾಡಿಕೊಂಡಿದೆ.

‘ಗೆದ್ದ ಕ್ಷೇತ್ರಗಳನ್ನು ಪಕ್ಷ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಆದರೂ ಈ ಕುರಿತು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂಬ ಭರವಸೆ ಸೋನಿಯಾ ಗಾಂಧಿ ಅವರಿಂದ ದೊರೆತಿದೆ. ಅಲ್ಲೇ ಇದ್ದ ರಾಹುಲ್‌ ಗಾಂಧಿ ಅವರಿಗೂ ಈ ಕುರಿತು ಮನವರಿಕೆ ಮಾಡಲಾಗಿದೆ ಎಂದು ಕೆಲವು ಸಂಸದರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಲ್ಬುರ್ಗಿ ಸಂಸದ, ಲೋಕಸಭೆಯ ಕಾಂಗ್ರೆಸ್‌ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೂ ನಮ್ಮ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದ್ದು, ಸೋನಿಯಾ ಹಾಗೂ ರಾಹುಲ್‌ ಗಾಂಧಿ ಅವರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.