ಪಟ್ನಾ: ಚುನಾವನಾ ಆಯೋಗದ ಅಧಿಕಾರಿಗಳು ಭಾನುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಲಿಕಾಪ್ಟರ್ ತಪಾಸಣೆ ಮಾಡಿದ್ದಾರೆ.
ಬಿಹಾರದ ಸಮಷ್ಠಿಪುರದಲ್ಲಿ ಚುನಾವಣಾ ಸಮಾವೇಶಕ್ಕೆ ಹೆಲಿಕಾಪ್ಟರ್ ಮೂಲಕ ಖರ್ಗೆ ಆಗಮಿಸಿದ್ದರು. ಅಲ್ಲಿ ಅವರ ಹೆಲಿಕಾಪ್ಟರ್ ಅನ್ನು ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ.
ಅಧಿಕಾರಿಗಳು ತಪಾಸಣೆ ಮಾಡುವ ವಿಡಿಯೊವನ್ನು ಕಾಂಗ್ರೆಸ್ ವಕ್ತಾರ ರಾಜೇಶ್ ರಾಥೋಡ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಎಂದು ಅವರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
‘ರಾಹುಲ್ ಗಾಂಧಿ ಬಳಿಕ ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಲಿಕಾಪ್ಟರ್ ಅನ್ನು ಬಿಹಾರದ ಸಮಷ್ಠಿಪುರದಲ್ಲಿ ಪೊಲೀಸ್ ಅಧಿಕಾರಿಗಳಿಂದ ಚುನಾವಣಾ ಆಯೋಗ ತಪಾಸಣೆ ಮಾಡಿಸಿದೆ. ಪೊಲೀಸರ ಈ ಕ್ರಮ ಪ್ರತಿಪಕ್ಷಗಳ ಬಗ್ಗೆ ಚುನಾವಣಾ ಆಯೋಗದ ದುರುದ್ದೇಶದ ವರ್ತನೆಯನ್ನು ತೋರಿಸುತ್ತದೆ, ಇದು ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಅವರು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.