ADVERTISEMENT

‍ಪ್ರಗ್ಯಾ ಸಿಂಗ್, ಲೇಖಿ... BJPಯ ಮೊದಲ ಪಟ್ಟಿಯಲ್ಲಿ ಪ್ರಮುಖರಿಗಿಲ್ಲ ಟಿಕೆಟ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 4:57 IST
Last Updated 3 ಮಾರ್ಚ್ 2024, 4:57 IST
<div class="paragraphs"><p>ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ</p></div>

ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ

   

– ಪಿಟಿಐ ಚಿತ್ರ

ನವದೆಹಲಿ: ಶನಿವಾರ ಬಿಜೆಪಿ ಬಿಡುಗಡೆ ಮಾಡಿದ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹಲವು ಪ್ರಮುಖ ನಾಯಕರು ಟಿಕೆಟ್ ವಂಚಿತರಾಗಿದ್ದಾರೆ.

ADVERTISEMENT

ಪಶ್ಚಿಮ ದೆಹಲಿಯ ಹಾಲಿ ಸಂಸದ, ಮಾಜಿ ಸಿಎಂ ಶಹಿಬ್ ಸಿಂಗ್ ವರ್ಮಾ ಪುತ್ರ ಪರ್ವೇಶ್ ವರ್ಮಾ, ಕೇಂದ್ರದ ಮಾಜಿ ಸಂಸದ ಹಾಗೂ ಹಜಾರಿಬಾಗ್ ಸಂಸದ ಜಯಂತ್‌ ಸಿನ್ಹಾ, ಭೋಪಾಲ್ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್‌, ಲೋಕಸಭೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದ ದಕ್ಷಿಣ ದೆಹಲಿ ಸಂಸದ ರಮೇಶ್ ಬಿಧೂಡಿ, ಕೇಂದ್ರ ಸಚಿವರಾದ ಮೀನಾಕ್ಷಿ ಲೇಖಿ ಹಾಗೂ ರಾಮೇಶ್ವರ್ ತೆಲಿ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿದೆ.

ಟಿಕೆಟ್ ಘೋಷಣೆ ಮಾಡಿರುವ 195 ಕ್ಷೇತ್ರಗಳ ಪೈಕಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಾಲಿ ಸಂಸದರಿದ್ದಾರೆ. 30 ಕ್ಷೇತ್ರಗಳು, ಒಂದು ವರ್ಷದ ಹಿಂದೆ ಪಕ್ಷವು ಗುರುತಿಸಿದ್ದ 160 ‘ದುರ್ಬಲ ಕ್ಷೇತ್ರ’ಗಳಲ್ಲಿ ಸೇರಿವೆ. ಈ ಕ್ಷೇತ್ರಗಳಲ್ಲಿ ಒಂದೋ ಬಿಜೆಪಿ ಸೋತಿದೆ, ಅಥವಾ ಈವರೆಗೂ ಸ್ಪರ್ಧೆ ಮಾಡಿಯೇ ಇಲ್ಲ.

ದೆಹಲಿ ಹಾಗೂ ಅಸ್ಸಾಂನಲ್ಲಿ ಬಿಜೆಪಿ ಅಮೂಲಾಗ್ರ ಬದಲಾವಣೆ ಮಾಡಿದ್ದು, ಹಲವು ಹೊಸ ಮುಖಗಳಿಗೆ ಮಣೆ ಹಾಕಿದೆ. ದೆಹಲಿಯ ಚಾಂದಿನಿ ಚೌಕ್‌ನಲ್ಲಿ ಕೇಂದ್ರದ ಮಾಜಿ ಸಚಿವ ಹರ್ಷವರ್ಧನ್ ಬದಲಿಗೆ ವ್ಯಾಪಾರ ಒಕ್ಕೂಟದ ನಾಯಕ ಪ್ರವೀಣ್ ಖಂಡೆಲ್‌ವಾಲ, ನವದೆಹಲಿ ಕ್ಷೇತ್ರದಿಂದ ಮೀನಾಕ್ಷಿ ಲೇಖಿ ಬದಲಾಗಿ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್‌, ಪಶ್ಚಿಮ ದೆಹಲಿಯಲ್ಲಿ ಪರ್ವೇಶ್ ವರ್ಮಾ ಬದಲಿಗೆ ಕಮಲ್‌ಜಿತ್‌ ಶೆರಾವತ್‌, ದಕ್ಷಿಣ ದೆಹಲಿಯಲ್ಲಿ ರಮೇಶ್ ಬಿಧೂಡಿ ಬದಲಾಗಿ ರಮ್‌ವೀರ್‌ ಸಿಂಗ್‌ ವಿಢೂಡಿ ಅವರನ್ನು ಕಣಕ್ಕಿಳಿಸಲಾಗಿದೆ. ಅಸ್ಸಾಂನ ವಿವಿಧ ಲೋಕಸಭಾ ಕ್ಷೇತ್ರಗಳಿಗೆ ಘೋಷಣೆಯಾದ 11 ಅಭ್ಯರ್ಥಿಗಳ ಪೈಕಿ 8 ಮಂದಿ ಹೊಸಮುಖಗಳು.

ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೂ ಮುನ್ನವೇ ಸಂಸದರಾದ ಜಯಂತ್ ಸಿನ್ಹಾ ಹಾಗೂ ಗೌತಮ್ ಗಂಭೀರ್, ಚುನಾವಣೆ ರಾಜಕೀಯದಿಂದ ತಮ್ಮನ್ನು ಬಿಡುಗಡೆ ಮಾಡಬೇಕು ಎಂದು ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಕೋರಿದ್ದೇವೆ ಎಂದು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದರು. ಕ್ರಿಕೆಟ್‌ ಮೇಲೆ ಹೆಚ್ಚು ಗಮನ ಹರಿಸಲು ತನ್ನನ್ನು ರಾಜಕೀಯ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಗಂಭೀರ್ ಕೋರಿದ್ದರು. ಹವಾಮಾನ ಬದಲಾವಣೆ ವಿರುದ್ಧದ ಹೋರಾಟದ ಬಗ್ಗೆ ಗಮನಹರಿಸಲು ತಮ್ಮನ್ನು ಬಿಡುಗಡೆಗೊಳಿಸಬೇಕು ಎಂದು ಜಯಂತ್ ಸಿನ್ಹಾ ಪಕ್ಷದ ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡಿದ್ದರು.

ಕೆಲ ಹೊಸ ಹೆಸರುಗಳು ಕೂಡ ಪಟ್ಟಿಯಲ್ಲಿದ್ದು, ಛತ್ತೀಸಗಢ ಸರ್ಕಾರದಲ್ಲಿ ಸಚಿವರಾಗಿರುವ ಬ್ರಿಜ್ ಮೋಹನ್ ಅಗರ್‌ವಾಲ್‌ ಅವರಿಗೆ ರಾಯಪುರದಿಂದ ಟಿಕೆಟ್ ನೀಡಲಾಗಿದೆ. ಸಿಂಗ್‌ಭುಮ್‌ನಿಂದ ಜಾರ್ಖಂಡ್‌ನ ಮಾಜಿ ಸಿಎಂ ಮಧು ಕೊಡಾ ಅವರ ಪ‌ತ್ನಿ ಗೀತಾ ಕೊಡಾ ಅವರನ್ನು ಕಣಕ್ಕಿಳಿಸಲಾಗಿದೆ.

ಕೇರಳದ ಪತ್ತನಂತಿಟ್ಟದಿಂದ ಕೇಂದ್ರದ ಮಾಜಿ ಸಚಿವ ಎ.ಕೆ ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಅವರನ್ನು, ಉಮಾ ಭಾರತಿಯವರ ಸೋದರಳಿಯ ರಾಹುಲ್ ಲೋಧಿ ಅವರನ್ನು ದಾಮೋಹ್‌ನಿಂದ, ಉತ್ತರ ಪ್ರದೇಶದ ಶ್ರಾವಸ್ತಿಯಿಂದ ಅಯೋಧ್ಯೆ ದೇವಸ್ಥಾನದ ಟ್ರಸ್ಟಿ ನೃಪೇಂದ್ರ ಮಿಶ್ರಾ ಅವರ ಪುತ್ರ ಸಾಕೇತ್ ಮಿಶ್ರಾ ಅವರನ್ನು ಉಮೇದುವಾರರನ್ನಾಗಿ ಮಾಡಲಾಗಿದೆ.

ಬಿಎಸ್‌ಪಿಯಿಂದ ಬಿಜೆಪಿ ಸೇರಿದ್ದ ರಿತೇಶ್ ಪಾಂಡೆ ಅಂಬೇಡ್ಕರ್‌ ನಗರದಿಂದ ಹಾಗೂ ಪಶ್ಚಿಮ ಬಂಗಾಳದ ಅಸಾಂಸೋಲ್‌ನಿಂದ ಭೋಜ್‌ಪುರಿ ಸಿನಿಮಾ ನಟ ಪವನ್ ಸಿಂಗ್ ಅವರನ್ನು ಬಿಜೆಪಿ ಅದೃಷ್ಟ ಪರೀಕ್ಷೆಗೆ ಒಡ್ಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.