ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ 6.4ಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸಿವೆ.
‘ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಟ್ಟು ದೇಶ ಮತ್ತು ಜನರ ಕಲ್ಯಾಣಕ್ಕೆ ಆದ್ಯತೆ ನೀಡುವಂತೆ’ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
‘ಜಿಡಿಪಿ ಬೆಳವಣಿಗೆ ದರವು ಶೇ 6.4ಕ್ಕೆ ಕುಸಿಯುವ ನಿರೀಕ್ಷೆಯಿದೆ ಎಂದು ಹೆಚ್ಚಿನ ಪತ್ರಿಕೆಗಳು ಇಂದು ಪ್ರಮುಖ ಸುದ್ದಿಯಾಗಿ ಇದನ್ನು ಹೈಲೈಟ್ ಮಾಡಿವೆ. ಇದು ನಾಲ್ಕು ವರ್ಷಗಳಲ್ಲಿನ ಅತ್ಯಂತ ನಿಧಾನಗತಿಯ ಬೆಳವಣಿಗೆ ದರವಾಗಿದೆ. ಅದರ ಬಗ್ಗೆ ಯಾರಾದರೂ ನಿಜವಾಗಿಯೂ ದುಃಖಿತರಾಗಿದ್ದರೆ, ಅದು ದೇಶದ ಬಡವರು ಮತ್ತು ಶ್ರಮಜೀವಿಗಳಾಗಿದ್ದಾರೆ. ಇವರು ತಮ್ಮ ಶೋಚನೀಯ ಜೀವನದ ಹೊರತಾಗಿಯೂ ದೇಶದ ಬಗ್ಗೆ ಕೆಟ್ಟದ್ದನ್ನು ಕೇಳಿಸಿಕೊಳ್ಳಲು ಸಿದ್ಧರಿರುವುದಿಲ್ಲ’ ಎಂದು ಮಾಯಾವತಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿರಂತರವಾಗಿ ಕುಸಿಯುತ್ತಿರುವ ರೂಪಾಯಿ ಮೌಲ್ಯದೊಂದಿಗೆ ಬಡವರಿಗೆ ನೇರ ಸಂಬಂಧವಿಲ್ಲದಿದ್ದರೂ, ಈ ಬೆಳವಣಿಗೆಯಿಂದಾಗಿ ಜನರು ಬೇಸರಗೊಂಡಿದ್ದಾರೆ. ಕೇಂದ್ರ ಸರ್ಕಾರವು ಕೋಟ್ಯಂತರ ಜನರ ಭಾವನೆಗಳನ್ನು ಗೌರವಿಸಬೇಕು. ಹಾಗೆಯೇ ದಿನದ 24 ಗಂಟೆ ಚಿಲ್ಲರೆ ರಾಜಕೀಯ ಮಾಡುವುದನ್ನು ಬಿಟ್ಟು ದೇಶ ಮತ್ತು ‘ಅಚ್ಛೇ ದಿನ್’ದ ನಿರೀಕ್ಷೆಯಲ್ಲಿರುವ ಜನರ ಕಲ್ಯಾಣಕ್ಕೆ ಆದ್ಯತೆ ನೀಡಬೇಕು’ ಎಂದು ಮಾಯಾವತಿ ಗುಡುಗಿದ್ದಾರೆ.
ದೇಶದ ಜಿಡಿಪಿ ಬೆಳವಣಿಗೆಯ ಮಂದಗತಿಯ ವಾಸ್ತವತೆಯನ್ನು ಕೇಂದ್ರ ಸರ್ಕಾರವು ಇನ್ನು ಮುಂದೆ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ.
2024–25ನೇ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ 6.4ರಷ್ಟು ಪ್ರಗತಿ ಕಾಣುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಅಂದಾಜಿಸಿತ್ತು. ತಯಾರಿಕಾ ಮತ್ತು ಸೇವಾ ವಲಯದ ಬೆಳವಣಿಗೆ ಕುಸಿತವೇ ಜಿಡಿಪಿ ಇಳಿಕೆಗೆ ಕಾರಣ ಎಂದು ಮಂಗಳವಾರ ಬಿಡುಗಡೆಯಾಗಿರುವ ಮೊದಲ ಅಂದಾಜು ವರದಿ ತಿಳಿಸಿತ್ತು.
2020–21ನೇ ಆರ್ಥಿಕ ವರ್ಷದ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಜಿಡಿಪಿ ಬೆಳವಣಿಗೆಯು ಶೇ 5.8ರಷ್ಟು ಕಡಿಮೆ ದಾಖಲಾಗಿತ್ತು. ಆ ನಂತರದ ಆರ್ಥಿಕ ವರ್ಷಗಳಲ್ಲಿ ಚೇತರಿಕೆಯ ಹಳಿಗೆ ಮರಳಿತ್ತು. 2021–22ರಲ್ಲಿ ಶೇ 9.7, 2022–23ರಲ್ಲಿ ಶೇ 7 ಹಾಗೂ 2023–24ರಲ್ಲಿ ಶೇ 8.2ರಷ್ಟು ದಾಖಲಾಗಿತ್ತು.
ಕಳೆದ ವರ್ಷದ ಡಿಸೆಂಬರ್‌ನಲ್ಲಿ 2024–25ರ ಜಿಡಿಪಿ ಮುನ್ನೋಟವನ್ನು ಪರಿಷ್ಕರಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಶೇ 6.6ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಿತ್ತು. ಕೇಂದ್ರ ಹಣಕಾಸು ಸಚಿವಾಲಯವು ಶೇ 6.5ರಿಂದ ಶೇ 7ರಷ್ಟು ಪ್ರಗತಿ ಕಾಣಲಿದೆ ಎಂದು ಹೇಳಿದೆ. ಆದರೆ, ಸಾಂಖ್ಯಿಕ ಕಚೇರಿಯ ಅಂದಾಜು, ಆರ್‌ಬಿಐ ಹಾಗೂ ಹಣಕಾಸು ಸಚಿವಾಲಯದ ಅಂದಾಜಿಗಿಂತಲೂ ಕಡಿಮೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.