ನವದೆಹಲಿ: ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಲಾರ್ಸೆನ್ ಆ್ಯಂಡ್ ಟೂಬ್ರೋ (ಎಲ್ ಆ್ಯಂಡ್ ಟಿ) ಅಧ್ಯಕ್ಷ ಎಸ್. ಎನ್ ಸುಬ್ರಹ್ಮಣ್ಯನ್ ಅವರ ಮತ್ತೊಂದು ಹೇಳಿಕೆ ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ.
ತಮ್ಮ ಊರಿನಲ್ಲಿ ಜನ ಸುಖವಾಗಿರುವುದರಿಂದ ಕೆಲಸಕ್ಕಾಗಿ ಬೇರೆ ಕಡೆ ಹೋಗಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ನಿರ್ಮಾಣ ವಲಯದಲ್ಲಿ ಕಾರ್ಮಿಕರ ಕೊರತೆಯಾಗಿದೆ. ಭಾರತೀಯರು ಕಚೇರಿಗಿಂತ ಮನೆಯಿಂದಲೇ ಕೆಲಸ ಮಾಡಲು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.
ಚೆನ್ನೈನಲ್ಲಿ ಮಂಗಳವಾರ ಸಿಐಐ ಸಂಘಟಿಸಿದ್ದ ‘ಸೌತ್ ಗ್ಲೋಬಲ್ ಲಿಂಕೇಜಸ್ ಸಮ್ಮಿಟ್–2025’ರಲ್ಲಿ ಅವರು ಮಾತನಾಡಿದ್ದಾರೆ.
‘ನಿರ್ಮಾಣ ವಲಯದಲ್ಲಿ ಕಾರ್ಮಿಕರು ಸಿಗುವುದೇ ಕಷ್ಟವಾಗಿದೆ. ನೆಮ್ಮದಿಯ ಜೀವನ ಬಯಸುವುದರಿದ ಅವರು ಊರು ಬಿಟ್ಟು ಬರುತ್ತಿಲ್ಲ. ನರೇಗಾ, ನೇರ ನಗದು ವರ್ಗಾವಣೆ ಹಾಗೂ ಜನಧನ ಖಾತೆಗಳಿಂದಾಗಿ ಕಾರ್ಮಿಕರ ಲಭ್ಯತೆ ಕಡಿಮೆಯಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
‘ಅವಕಾಶಗಳನ್ನು ಹುಡುಕಿಕೊಂಡು ಜನ ವಲಸೆ ಹೋಗುತ್ತಿಲ್ಲ. ಸ್ಥಳೀಯ ಆರ್ಥಿಕತೆ ಚೆನ್ನಾಗಿರುವುದರಿಂದಲೂ ಆಗಿರಬಹುದು. ಅಥವಾ ಸರ್ಕಾರದ ವಿವಿಧ ಯೋಜನೆಗಳಿಂದಲೂ ಆಗಿರಬಹುದು’ ಎಂದು ಹೇಳಿದ್ದಾರೆ. ಅಲ್ಲದೆ ಕಾರ್ಮಿಕರ ಕೊರತೆ ಭಾರತದ ಮೂಲಸೌಕರ್ಯ ನಿರ್ಮಾಣದ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.
ಭಾರತವು ವಲಸೆಯ ವಿಶಿಷ್ಟ ಸಮಸ್ಯೆಯನ್ನು ಎದುರಿಸುತ್ತಿದೆ. ಹಣದುಬ್ಬರಕ್ಕೆ ಅನುಗುಣವಾಗಿ ಕಾರ್ಮಿಕರ ವೇತನವನ್ನು ಪರಿಷ್ಕರಿಸಬೇಕು. ಮಧ್ಯಪ್ರಾಚ್ಯದಲ್ಲಿ 3.5 ಪಟ್ಟು ಹೆಚ್ಚಿನ ವೇತನ ಸಿಗುವುದರಿಂದ ಭಾರತೀಯ ಕಾರ್ಮಿಕರು ಆ ಕಡೆ ತೆರಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
‘ಐಟಿ ಉದ್ಯೋಗಿಯನ್ನು ಕಚೇರಿಗೆ ಬಂದು ಕೆಲಸ ಮಾಡಿ ಎಂದು ಹೇಳಿ. ಆಗ ಅವರು ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ. ನಾನು 1983 ರಲ್ಲಿ ಎಲ್ & ಟಿ ಗೆ ಸೇರಿದಾಗ, ನನ್ನ ಬಾಸ್, ನೀವು ಚೆನ್ನೈನವರಾಗಿದ್ದರೆ, ದೆಹಲಿಗೆ ಹೋಗಿ ಕೆಲಸ ಮಾಡಿ ಎಂದು ಹೇಳಿದ್ದರು. ಇಂದು ನಾನು ಚೆನ್ನೈನ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ದೆಹಲಿಗೆ ಹೋಗಿ ಕೆಲಸ ಮಾಡಲು ಹೇಳಿದರೆ, ಅವರು ರಾಜೀನಾಮೆ ನೀಡುತ್ತಾರೆ. ಸ್ಥಳಾಂತರಗೊಳ್ಳಲು ಐಟಿ ವಲಯದಲ್ಲಿ ಹಿಂಜರಿಕೆ ಇನ್ನೂ ಹೆಚ್ಚಿದೆ. ಉದ್ಯೋಗಿಗಳು ಕಚೇರಿಗೆ ಬರುವುದಕ್ಕಿಂತ ರಿಮೋಟ್ ಕೆಲಸಕ್ಕೆ ಆದ್ಯತೆ ನೀಡುತ್ತಾರೆ’ ಎಂದು ಹೇಳಿದ್ದಾರೆ.
‘ಭಾನುವಾರದಂದು ಸಹ ಕೆಲಸ ಮಾಡಬೇಕು. ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ನಿಮ್ಮ ಹೆಂಡತಿಯನ್ನು ಎಷ್ಟು ಹೊತ್ತು ನೋಡಬಹುದು? ಕಚೇರಿಗೆ ಹೋಗಿ ಕೆಲಸ ಮಾಡಲು ಪ್ರಾರಂಭಿಸಿ. ನಾನು ಭಾನುವಾರವೂ ಕೆಲಸ ಕೆಲಸ ಮಾಡುತ್ತೇನೆ’ ಎಂದು ಅವರು ಈ ಹಿಂದೆ ಹೇಳಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.