ಪ್ರಾತಿನಿಧಿಕ ಚಿತ್ರ
ಲಖನೌ: ಉತ್ತರ ಪ್ರದೇಶದ ಇಟವಾ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಅನಾರೋಗ್ಯ ಪೀಡಿತ ತಾಯಿಯನ್ನು ಪರೀಕ್ಷಿಸಲು ಜಿಲ್ಲಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರನ್ನು ಪೊಲೀಸರು ಒತ್ತಾಯದಿಂದ ಕಾರಿನಲ್ಲಿ ಎಳೆದೊಯ್ದ ಘಟನೆ ನಡೆದಿದೆ.
ಡಾ. ರಾಹುಲ್ ಬಾಬು ರಾಜ್‌ಪುತ್ ಅವರನ್ನು ಒತ್ತಾಯದಿಂದ ಕರೆದೊಯ್ದ ಪೊಲೀಸರನ್ನು ಅಮಾನತು ಮಾಡಲಾಗಿದೆ ಎನ್ನಲಾಗುತ್ತಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ.
‘ಇಲ್ಲಿನ ಕೆಲಸ ಬಿಟ್ಟು ಬರುವುದಕ್ಕೆ ಸಾಧ್ಯವಿಲ್ಲ. ತುರ್ತು ಚಿಕಿತ್ಸೆಗಾಗಿ ರೋಗಿಗಳು ಬರುತ್ತಲೇ ಇರುತ್ತಾರೆ. ಅವರ ತಾಯಿಯನ್ನು ಪರೀಕ್ಷಿಸಲು ಇತರೆ ವೈದ್ಯರನ್ನು ಕಳುಹಿಸಿವುದಾಗಿ ರಾಹುಲ್ ಅವರು ತಿಳಿಸಿದರೂ ಅವರನ್ನು ಬರುವಂತೆ ಒತ್ತಾಯಪಡಿಸಲಾಗಿದೆ. ರಾಹುಲ್ ಅವರು ಪೊಲೀಸರೊಂದಿಗೆ ಹೋಗುವುದಕ್ಕೆ ಒಪ್ಪದಿರುವುದಕ್ಕೆ ಪೊಲೀಸರು ಕೋಪಗೊಂಡಿದ್ದರು ಎನ್ನಲಾಗಿದೆ.
ಘಟನೆಯ ವಿರುದ್ಧ ಜಿಲ್ಲಾ ಆಸ್ಪತ್ರೆಯ ಇತರೆ ವೈದ್ಯರು ಹಾಗೂ ಸಿಬ್ಬಂದಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಇಂಥ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕ್ರಮ ತೆಗೆದುಕೊಳ್ಳುವುದಾಗಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.