ADVERTISEMENT

ಸಿಪಿಐಎಂನ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎ.ಬೇಬಿ ಆಯ್ಕೆ

ಪಿಟಿಐ
Published 6 ಏಪ್ರಿಲ್ 2025, 11:41 IST
Last Updated 6 ಏಪ್ರಿಲ್ 2025, 11:41 IST
<div class="paragraphs"><p>ಎಂ.ಎ.ಬೇಬಿ</p></div>

ಎಂ.ಎ.ಬೇಬಿ

   

ಮಧುರೈ/ನವದೆಹಲಿ: ಕೇರಳದ ಮಾಜಿ ಸಚಿವ ಎಂ.ಎ. ಬೇಬಿ ಅವರು ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.  ಮಧುರೈನಲ್ಲಿ ಭಾನುವಾರ ನಡೆದ ಸಿಪಿಎಂನ 24ನೇ ಸಮಾವೇಶದಲ್ಲಿ ಈ ಆಯ್ಕೆ ಮಾಡಲಾಗಿದೆ.

ಪಕ್ಷದ ಕೇಂದ್ರ ಸಮಿತಿ ಹಾಗೂ ಪಾಲಿಟ್‌ ಬ್ಯುರೊ ಪುನರ್‌ರಚನೆಯಾಗಿದ್ದು, ಹೊಸಬರಿಗೆ, ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಕಳೆದ ವರ್ಷ ಸೀತಾರಾಮ್ ಯೆಚೂರಿ ನಿಧನರಾದ ನಂತರ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಖಾಲಿಯಿತ್ತು. ಪ್ರಕಾಶ್‌ ಕಾರಟ್‌ ಹಂಗಾಮಿಯಾಗಿ ಈ ಜವಾಬ್ದಾರಿ ನಿರ್ವಹಿಸುತ್ತಿದ್ದರು.

ಪಶ್ಚಿಮ ಬಂಗಾಳದ ಮುಖಂಡರು ಪಕ್ಷದ ಪಾಲಿಟ್‌ ಬ್ಯುರೊ ಸಭೆಯಲ್ಲಿ, ಅಖಿಲ ಭಾರತ ಕಿಸಾನ್‌ ಸಭಾ (ಎಐಕೆಎಸ್‌) ಅಧ್ಯಕ್ಷ ಅಶೋಕ್‌ ಧವಲೆ ಅವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬೆಂಬಲಿಸಿದ್ದರು.

ಆದರೆ, ಪಾಲಿಟ್‌ ಬ್ಯುರೊದ 16 ಸದಸ್ಯರಲ್ಲಿ 11 ಸದಸ್ಯರು ಕೇರಳದ ಮಾಜಿ ಸಚಿವರಿಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ, ಬೇಬಿ ಅವರು ಬಹುಮತದಿಂದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು ಎಂದು ಮೂಲಗಳು ತಿಳಿಸಿವೆ.

ಕೇರಳದ ಪ್ರಾಕ್ಕುಳಂನಲ್ಲಿ ಪಿ.ಎಂ.ಅಲೆಕ್ಸಾಂಡರ್‌– ಲಿಲ್ಲಿ ದಂಪತಿಯ ಮಗನಾಗಿ 1954ರಲ್ಲಿ ಜನಿಸಿದ ಮರಿಯಮ್‌ ಅಲೆಕ್ಸಾಂಡರ್‌ ಬೇಬಿ (ಎಂ.ಎ.ಬೇಬಿ) ಅವರು, ತಮ್ಮ ಶಾಲಾ ದಿನಗಳಲ್ಲಿ ಎಸ್‌ಎಫ್‌ಐನ ಅಂಗಸಂಸ್ಥೆಯಾದ ಕೇರಳ ವಿದ್ಯಾರ್ಥಿ ಸಂಘಟನೆ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದರು.

1986ರಿಂದ 1998ರವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದ ಬೇಬಿ, 2006ರಿಂದ 11ರವರೆಗೆ ಕೇರಳದ ಶಿಕ್ಷಣ ಸಚಿವರಾಗಿದ್ದರು. 2012ರಿಂದಲೂ ಸಿಪಿಎಂ ಪಾಲಿಟ್‌ ಬ್ಯುರೊ ಸದಸ್ಯರಾಗಿದ್ದಾರೆ.

ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಕೇರಳದಿಂದ ಆಯ್ಕೆಯಾದ ಮೊದಲಿಗ ಇಎಂಎಸ್ ನಂಬೂದರಿಪಾದ್‌. ಇವರ ನಂತರ ಬೇಬಿ ಎರಡನೇಯವರಾಗಿ ಆಯ್ಕೆಯಾಗಿದ್ದಾರೆ.

ಹೊಸ ಮುಖಗಳಿಗೆ ಮಣೆ

75 ವರ್ಷ ದಾಟಿದವರನ್ನು ನಿವೃತ್ತಿಗೊಳಿಸುವ ನಿಯಮ ಸಿಪಿಎಂ ಪಕ್ಷದಲ್ಲಿದೆ. ಈ ಮಾನದಂಡದಂತೆ ಹಿರಿಯ ಮುಖಂಡರಾದ ಪ್ರಕಾಶ್‌ ಕಾರಟ್‌, ಬೃಂದಾ ಕಾರಟ್‌, ಮಾಣಿಕ್‌ ಸರ್ಕಾರ್‌, ಸೂರ್ಯಕಾಂತ್ ಮಿಶ್ರಾ, ಸುಭಾಶಿನಿ ಅಲಿ, ಶ್ರೀನಿವಾಸರಾವ್‌, ಜಿ.ರಾಮಕೃಷ್ಣ ಪಾಲಿಟ್‌ ಬ್ಯುರೊದಿಂದ ಹೊರನಡೆದಿದ್ದಾರೆ.

ನೂತನ ಪಾಲಿಟ್‌ ಬ್ಯುರೊದಲ್ಲಿ 18 ಸದಸ್ಯರಿದ್ದಾರೆ. ಈಗಿರುವ ಸದಸ್ಯರಿಗಿಂತ ಒಬ್ಬರು ಹೆಚ್ಚು. ಎಂಟು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.  ಕಿಸಾನ್‌ ಸಭಾ ಪ್ರಧಾನ ಕಾರ್ಯದರ್ಶಿ ವಿಜು ಕೃಷ್ಣನ್‌, ಎಐಡಬ್ಲ್ಯುಎ ಪ್ರಧಾನ ಕಾರ್ಯದರ್ಶಿ ಮರಿಯಮ್ ಧವಲೆ, ಲೋಕಸಭಾ ಸದಸ್ಯರಾದ ಆಮ್ರಾ ರಾವ್‌, ಅರುಣ್‌ಕುಮಾರ್‌, ಯು. ವಾಸುಕಿ ಪಾಲಿಟ್‌ ಬ್ಯುರೊಗೆ ಸೇರ್ಪಡೆಯಾದ ಹೊಸಬರಲ್ಲಿ ಪ್ರಮುಖರು.

85 ಸದಸ್ಯ ಬಲದ ಕೇಂದ್ರ ಸಮಿತಿಯಲ್ಲಿ 30 ಹೊಸ ಸದಸ್ಯರಿಗೆ ಅವಕಾಶ ಒದಗಿಸಿದ್ದು, ಈ ಪೈಕಿ 17 ಮಂದಿ ಮಹಿಳೆಯರು. ಒಂದು ಸ್ಥಾನ ಖಾಲಿ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.