ADVERTISEMENT

ಮಧ್ಯಪ್ರದೇಶ ಸಿಎಂ ಚೌಹಾಣ್ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ: ಕಮಲ್ ನಾಥ್

ಏಜೆನ್ಸೀಸ್
Published 25 ಜನವರಿ 2021, 11:09 IST
Last Updated 25 ಜನವರಿ 2021, 11:09 IST
ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್
ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್   

ಇಂಧೋರ್: ಮಧ್ಯಪ್ರದೇಶಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಜನರನ್ನು ದಿಕ್ಕು ತಪ್ಪಿಸುವ ಹಾಗೂ ಅವರ ಗಮನವನ್ನು ನಿಜವಾದ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯುವ ಪ್ರಯುತ್ನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಆರೋಪಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷರೂ ಆಗಿರುವ ಕಮಲ್‌, ಜನರು ಮುಖ್ಯಮಂತ್ರಿಯವರ ‘ಸುಳ್ಳುಗಳನ್ನು’ ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

‘ಶಿವರಾಜ್‌ ಸುಳ್ಳುಗಳನ್ನು ಹೇಳದೇ ಆಹಾರವನ್ನು ಜಿರ್ಣಿಸಿಕೊಳ್ಳಲಾರರು. ಅವರು ಪ್ರತಿ ದಿನ ಹೊಸ ಸುಳ್ಳು ಹೇಳುತ್ತಾರೆ. ಈ ಹಿಂದೆ ಅವರು ಇನ್ನೂ ಜಾರಿಯಾಗದ ಸರಿಸುಮಾರು 15,000 ಘೋಷಣೆಗಳನ್ನು ಮಾಡಿದ್ದಾರೆ. ನೀವು (ರಾಜ್ಯದ ಜನರು) ಅವರು ಮಾಡುತ್ತಿರುವ ರಾಜಕೀಯವನ್ನು ಅರ್ಥಮಾಡಿಕೊಳ್ಳಬೇಕು. ಇದು ನಿಮ್ಮನ್ನು ದಾರಿ ತಪ್ಪಿಸುವ ಹಾಗೂ ನಿಮ್ಮ ಗಮನವನ್ನು ನಿಜವಾದ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯುವ ತಂತ್ರವಾಗಿದೆ’ ಎಂದು ದೇಪಾಲ್‌ಪುರದಲ್ಲಿ ನಡೆದ ಟ್ರ್ಯಾಕ್ಟರ್‌ ರ‍್ಯಾಲಿ ಬಳಿಕ ಮಾತನಾಡಿದ್ದಾರೆ.

ADVERTISEMENT

ಅದೇರೀತಿ, ‘ಬಿಜೆಪಿಯು ಯುವಕರ ಗಮನವನ್ನು ದೇಶದ ನಿಜವಾದ ಸಮಸ್ಯೆಗಳ ಬದಲು ಬೇರೆಡೆಗೆ ತಿರುಗಿಸುತ್ತಿದೆ. ಬಿಜೆಪಿ ಯಾವೊಬ್ಬ ಸ್ವಾತಂತ್ರ್ಯ ಹೋರಾಟಗಾರರನ್ನೂ ಹೊಂದಿಲ್ಲ. ಅವರು ದೇಶಭಕ್ತಿಯ ಹೆಸರಲ್ಲಿ ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ’ ಎಂದೂ ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರ ರೂಪಿಸಿರುವ ಕೃಷಿಗೆ ಸಂಬಂಧಿಸಿದ ಮೂರು ಕಾನೂನುಗಳನ್ನು ಹಿಂಪಡೆಯಬೇಕೆಂದು ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಲು ಟ್ರ್ಯಾಕ್ಟರ್‌ ರ‍್ಯಾಲಿಯಲ್ಲಿ ಭಾಗಿಯಾದರು.

‘ಈ ಮೂರು ಕಪ್ಪು ಕಾನೂನುಗಳ ಮೂಲಕ ಕೃಷಿ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದರಿಂದ ದೇಶದಲ್ಲಿ ವಿನಾಶ ಉಂಟಾಗುತ್ತದೆ. ಏಕೆಂದರೆ ಧಾನ್ಯಗಳನ್ನು ಸಂಗ್ರಹಿಸಲು ಯಾವುದೇ ಮಿತಿ ಇರುವುದಿಲ್ಲ. ಇದರಿಂದ ಕೈಗಾರಿಕೋದ್ಯಮಿಗಳಿಗೆ ಪ್ರಯೋಜನವಾಗಲಿದೆ ಮತ್ತು ರೈತರಿಗೆ ಹಾನಿಕಾರಕ. ಈ ಖಾಸಗೀಕರಣದಿಂದ ಅವರ (ಬಿಜೆಪಿಯವರ) ಲಾಭಕ್ಕಾಗಿ ರೈತರ ಮೇಲೆ ಪರಿಣಾಮ ಉಂಟಾಗುತ್ತದೆ. ಆ ಕಾರಣಕ್ಕಾಗಿಯೇ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿದ್ದಾರೆ’ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಕಾಂಗ್ರೆಸ್‌ ಪಕ್ಷದ ಮಾಜಿ ಸಚಿವ ಸಜ್ಜನ್‌ ಸಿಂಗ್‌ ವರ್ಣ ಹಾಗೂ ಇತರ ನಾಯಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.