
ಭೋಪಾಲ್ (ಮಧ್ಯಪ್ರದೇಶ): ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಬಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರು ಮಕ್ಕಳಿಗೆ ಎಚ್‌ಐವಿ ತಗುಲಿರುವುದು ಖಚಿತವಾಗುತ್ತಿದ್ದಂತೆ, ರಾಜ್ಯ ಸರ್ಕಾರದ ರಕ್ತ ನಿಧಿ ಕೇಂದ್ರದ ಉಸ್ತುವಾರಿ ಹಾಗೂ ಇಬ್ಬರು ಲ್ಯಾಬ್ ಟೆಕ್ನೀಷಿಯನ್ಸ್‌ಗಳನ್ನು ಅಮಾನತು ಮಾಡಲಾಗಿದೆ.
ಸೋಂಕಿತರ ರಕ್ತವನ್ನು ಮಕ್ಕಳಿಗೆ ನೀಡಲಾಗಿದೆ ಎಂಬ ಪ್ರಕರಣದ ತನಿಖೆಗೆ ರಚಿಸಲಾಗಿರುವ ಸಮಿತಿ ಪ್ರಾಥಮಿಕ ವರದಿಯ ಆಧಾರದಲ್ಲಿ ಗುರುವಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳಿಗೆ ಎಚ್‌ಐವಿ ಸೋಂಕು ತಗುಲಿರುವ ಪ್ರಕರಣ ತನಿಖೆ ಸಲುವಾಗಿ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಡಿಸೆಂಬರ್ 16ರಂದು ಸಮಿತಿ ರಚಿಸಿತ್ತು.
ವರದಿಯ ಬೆನ್ನಲ್ಲೇ, ರಕ್ತ ಬ್ಯಾಂಕ್‌ನ ಉಸ್ತುವಾರಿ ಡಾ. ದೇವೇಂದ್ರ ಪಟೇಳ್, ಪ್ರಯೋಗಾಲಯದ ತಂತ್ರಜ್ಞ ರಾಮ್ ಭಾಯ್ ತ್ರಿಪಾಠಿ ಮತ್ತು ನಂದಲಾಲ್ ಪಾಂಡೆ ಎಂಬವರನ್ನು ಅಮಾನತು ಮಾಡಲಾಗಿದೆ. ಹಾಗೆಯೇ, ಜಿಲ್ಲಾ ಆಸ್ಪತ್ರೆಯಲ್ಲಿ ಸಿವಿಲ್ ಸರ್ಜನ್ ಆಗಿದ್ದ ಮನೋಜ್ ಶುಕ್ಲಾ ಅವರಿಗೂ ಶೋಕಾಸ್ ನೋಟಿಸ್ ನೀಡಲಾಗಿದ್ದು, ಲಿಖಿತ ವಿವರಣೆ ನೀಡುವಂತೆ ಸೂಚಿಸಲಾಗಿದೆ. ಪ್ರತಿಕ್ರಿಯೆ ಸಮಂಜಸವಾಗಿದೆ ಎನಿಸದಿದ್ದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಲಾಗಿದೆ.
ಎಚ್‌ಐವಿ ಸೋಂಕಿತರ ರಕ್ತಪೂರಣದಿಂದಾಗಿ 12ರಿಂದ 15 ವರ್ಷದೊಳಗಿನ ಆರು ಮಕ್ಕಳಲ್ಲಿ ಇತ್ತೀಚೆಗೆ ಎಚ್‌ಐವಿ ದೃಢಪಟ್ಟಿತ್ತು. ನಂತರ ಒಬ್ಬರು ಫೋಷಕರಲ್ಲೂ ಸೋಂಕು ಪತ್ತೆಯಾಗಿತ್ತು ಎಂದು ಅಧಿಕಾರಿಗಳು ಮಂಗಳವಾರ (ಡಿ.16) ತಿಳಿಸಿದ್ದರು.
ಸತ್ನಾ, ಜಬಲ್ಪುರ ಮತ್ತು ಇತರೆಡೆಗಳಲ್ಲಿರುವ ಜಿಲ್ಲಾ ಆಸ್ಪತ್ರೆಗಳಲ್ಲಿ ಶಂಕಿತ ರಕ್ತ ವರ್ಗಾವಣೆಯ ನಂತರ 12 ರಿಂದ 15 ವರ್ಷದೊಳಗಿನ ಆರು ಮಕ್ಕಳು ಎಚ್‌ಐವಿ ಪಾಸಿಟಿವ್ ಎಂದು ಮೊದಲು ಕಂಡುಬಂದಿತ್ತು. ಅವರಲ್ಲಿ ಒಬ್ಬರ ಪೋಷಕರು ಸಹ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಮಂಗಳವಾರ (ಡಿ.16) ತಿಳಿಸಿದ್ದಾರೆ.
ಮಕ್ಕಳಿಗೆ ಜನವರಿ – ಮೇ ತಿಂಗಳ ನಡುವೆ ಸೋಂಕಿತ ರಕ್ತಪೂರಣವಾಗಿರುವ ಸಾಧ್ಯತೆ ಇದೆ. ಎಲ್ಲ ಮಕ್ಕಳಿಗೆ ಎಚ್‌ಐವಿ ಪ್ರೋಟೊಕಾಲ್ ಅನುಸಾರ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.