ಭೋಪಾಲ್: ಜೋರಾಗಿ ಸಂಗೀತ ಹಾಕಿದ್ದರಿಂದ ತೊಂದರೆಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಪ್ರಕರಣ ಮಧ್ಯಪ್ರದೇಶದ ಅಶೋಕ ನಗರ ಜಿಲ್ಲೆಯಲ್ಲಿ ವರದಿಯಾಗಿದೆ.
ಚಂದೇರಿ ಠಾಣೆ ವ್ಯಾಪ್ತಿಯ ಗೊರಕಾಲ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಈ ಸಂಬಂಧ ರತಿರಾಮ್ ಅಹಿರ್ವಾರ್ ಮತ್ತು ಮುಕೇಶ್ ಅಹಿರ್ವಾರ್ ಎಂಬವರನ್ನು ಬಂಧಿಸಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಠಾಣಾಧಿಕಾರಿ ಮನೀಶ್ ಜದೌನ್ ಅವರು ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು, 'ಮೃತ ವ್ಯಕ್ತಿಯ ಮೊಮ್ಮಗಳು, ಪಕ್ಕದ ಮನೆಯವರು ಕೆಲವು ದಿನಗಳ ಹಿಂದೆ ಜೋರಾಗಿ ಸಂಗೀತ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ, ಸಂಗೀತ ಅಬ್ಬರವನ್ನು ಕಡಿಮೆ ಮಾಡದಿದ್ದಾಗ, ಆಕೆ ಪೊಲೀಸರಿಗೆ ಕರೆ ಮಾಡಿ ದೂರಿದ್ದರು. ಅದರಂತೆ, ಸಂಗೀತ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಬಾಲಕಿ 12ನೇ ತರಗತಿ ಓದುತ್ತಿದ್ದಾಳೆ' ಎಂದಿದ್ದಾರೆ.
ಮುಂದುವರಿದು, 'ಆರೋಪಿಗಳು ಇದೇ ವಿಚಾರವಾಗಿ, ಬಾಲಕಿಯ ತಂದೆ–ತಾಯಿಯೊಂದಿಗೆ ಶುಕ್ರವಾರ ರಾತ್ರಿ ಜಗಳವಾಡಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕಾಗಿ ದಂಪತಿ ಸ್ಥಳದಿಂದ ಪರಾರಿಯಾಗಿದ್ದರು. ಆದರೆ, ಆಕ್ರೋಶದಲ್ಲಿದ್ದ ಆರೋಪಿಗಳು ಬಾಲಕಿಯ ಅಜ್ಜ ಕಲುವಾ ಅಹಿರ್ವಾರ್ ಅವರ ಮೇಲೆ ದೊಣ್ಣೆ ಮತ್ತು ಮತ್ತಿತರ ಆಯುಧಗಳಿಂದ ತೀವ್ರವಾಗಿ ಹಲ್ಲೆ ಮಾಡಿದ್ದರು' ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.