ADVERTISEMENT

ಮಧ್ಯಪ್ರದೇಶ: ಖರ್ಗೋನ್‌ ಹಿಂಸಾಚಾರದ ವೇಳೆ ಕಾಣೆಯಾದ ಮಹಿಳೆ ಪತ್ತೆಗೆ ವಿಶೇಷ ತಂಡ

ಪಿಟಿಐ
Published 15 ಏಪ್ರಿಲ್ 2022, 14:40 IST
Last Updated 15 ಏಪ್ರಿಲ್ 2022, 14:40 IST
ಮಧ್ಯ ಪ್ರದೇಶದ ಖರ್ಗೋನ್‌ ನಗರದಲ್ಲಿ ನಡೆದಿದ್ದ ಹಿಂಸಾಚಾರ–ಸಂಗ್ರಹ ಚಿತ್ರ
ಮಧ್ಯ ಪ್ರದೇಶದ ಖರ್ಗೋನ್‌ ನಗರದಲ್ಲಿ ನಡೆದಿದ್ದ ಹಿಂಸಾಚಾರ–ಸಂಗ್ರಹ ಚಿತ್ರ   

ಖರ್ಗೋನ್‌: ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ರಾಮ ನವಮಿ ಸಂಭ್ರಮಾಚರಣೆ ವೇಳೆ (ಏ.10ರಂದು) ಹಿಂಸಾಚಾರ ನಡೆದಿತ್ತು. ಈ ಸಂದರ್ಭದಲ್ಲಿ ಕಾಣೆಯಾಗಿರುವ ಮಹಿಳೆಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಸಂಭ್ರಮಾಚರಣೆ ಸಂದರ್ಭದಲ್ಲಿ ಕಲ್ಲುತೂರಾಟ, ಗಲಭೆ ಆರಂಭವಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಮಹಿಳೆ, ಮನೆಯಿಂದ ಹೊರಗೆ ಹೋಗಿದ್ದ ಮಕ್ಕಳನ್ನು ಕರೆದುಕೊಂಡು ಬರಲು ತೆರಳಿದ್ದರು. ಮೆರವಣಿಗೆ ಸಾಗುತ್ತಿದ್ದ ಸ್ಥಳಕ್ಕೆ ಹತ್ತಿರದಲ್ಲೇ ಮಹಿಳೆಯ ಮನೆಯಿದೆ ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.

'ನಾಪತ್ತೆಯಾಗಿ ಆರು ದಿನಗಳಾದರೂ ನನ್ನ ತಮ್ಮ ಧರ್ಮೇಂದ್ರನ ಹೆಂಡತಿಯ ಪತ್ತೆಯಾಗಿಲ್ಲ. ಕರ್ಫ್ಯೂ ಹೇರಿಕೆ ಮಾಡಿರುವುದು ಸಂಕಟವನ್ನು ಹೆಚ್ಚಿಸಿದೆ. ರಾಮ ನವಮಿ ಆಚರಣೆ ದಿನ ನನ್ನ ಇಬ್ಬರು ಮಕ್ಕಳು ಹಾಗೂ ಧರ್ಮೇಂದ್ರನ ಮಗ, ಸರಫಾ ಪ್ರದೇಶದಲ್ಲಿರುವ ಜವಹಾರ್‌ ಮಾರ್ಗಕ್ಕೆ ತೆರಳಿದ್ದರು. ಕೆಲಹೊತ್ತಿನಲ್ಲೇ, ಗಲಭೆ ನಡೆಯುತ್ತಿರುವ ಬಗ್ಗೆ ವರದಿಯಾಗಿತ್ತು. ಹೀಗಾಗಿ ಮಕ್ಕಳನ್ನು ಸುರಕ್ಷಿತವಾಗಿ ಕರೆತರಲು ಆಕೆ (ನಾಪತ್ತೆಯಾಗಿರುವ ಮಹಿಳೆ) ಹೊರಗೆ ಹೋಗಿದ್ದರು' ಎಂದು ಪವನ್ ಕುಮಾರ್‌ ಸರೋನಿಯಾ ಹೇಳಿದ್ದಾರೆ.

ADVERTISEMENT

ಅದಾದ ಬಳಿಕ ಮಕ್ಕಳು ಮನೆಗೆ ಬಂದಿದ್ದರೂ, ಮಹಿಳೆ ಇನ್ನೂವಾಪಸ್‌ ಆಗಿಲ್ಲ. ಆಕೆಯ ಕುಟುಂಬ ಪೊಲೀಸರಿಗೆ ಮನವಿ ಮಾಡಿದೆ.

ಪೊಲೀಸರು 'ಹುಡುಕಾಟಕ್ಕೆ ಇದು ಸೂಕ್ತ ಸಮಯವಲ್ಲ ಎಂದು ಹೇಳಿದ್ದಾರೆ' ಎಂದು ಸರೋನಿಯಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಪತ್ನಿಯನ್ನು ಹುಡುಕಿಕೊಂಡು ಧರ್ಮೇಂದ್ರ ಗ್ವಾಲಿಯರ್‌ಗೆ ತೆರಳಿದ್ದಾರೆ. ಇದೇ ವೇಳೆ ಕುಟುಂಬದವರು ಸ್ಥಳೀಯ ಆರ್‌ಎಸ್‌ಎಸ್‌ ನಾಯಕರ ನೆರವು ಕೋರಿದ್ದೇವೆ. ಆಕೆ ನಾಪತ್ತೆಯಾದ ದಿನದಿಂದ ಮಕ್ಕಳ ಗೋಳಾಟ ನಿಂತಿಲ್ಲ ಎಂದೂಅಳಲು ತೋಡಿಕೊಂಡಿದ್ದಾರೆ.

ಮಹಿಳೆ ಪತ್ತೆಗಾಗಿ ವಿಶೇಷ ತಂಡ ರಚಿಸಿರುವುದಾಗಿ ಪೊಲೀಸ್‌ ಅಧಿಕಾರಿ ರೋಹಿತ್‌ ಕಶ್ವಾನಿ ಅವರು ತಿಳಿಸಿದ್ದಾರೆ.

ರಾಮ ನವಮಿ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದಿತ್ತು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಹಾಗೂ ಖರ್ಗೋನ್‌ನಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.