ADVERTISEMENT

ಮಕ್ಕಳ ಆಶ್ಲೀಲ ಚಿತ್ರ: ಒಂದೂವರೆ ವರ್ಷದಲ್ಲಿ 105 ಮಂದಿ ಬಂಧನ, 213 ಪ್ರಕರಣ  

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 12:06 IST
Last Updated 30 ಜುಲೈ 2021, 12:06 IST
   

ಮುಂಬೈ: ಮಕ್ಕಳ ಅಶ್ಲೀಲ ಚಿತ್ರ ತಯಾರಿಸಿದ, ಅಂತರ್ಜಾಲದಲ್ಲಿ ಹಂಚಿದ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರು ಕಳೆದ 18 ತಿಂಗಳಲ್ಲಿ 105 ಜನರನ್ನು ಬಂಧಿಸಿರುವುದಾಗಿಯೂ, 213 ಪ್ರಕರಣಗಳನ್ನು ದಾಖಲಿಸಿರುವುದಾಗಿಯೂ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೀಕರಣ ವಿಭಾಗ (ಎನ್‌ಸಿಆರ್‌ಬಿ) ಹಂಚಿಕೊಂಡಿರುವ ‘ಟಿಪ್‌ಲೈನ್ ರಿಪೋರ್ಟ್‌’ ಆಧರಿಸಿ ಕಳೆದ 18 ತಿಂಗಳುಗಳಲ್ಲಿ ಇಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಹಾರಾಷ್ಟ್ರ ಸೈಬರ್ ಪೊಲೀಸ್ ಅಧೀಕ್ಷಕ ಸಂಜಯ್ ಶಿಂಟ್ರೆ ತಿಳಿಸಿದ್ದಾರೆ.

ಈ ‘ಟಿಪ್‌ಲೈನ್‌ ರಿಪೋರ್ಟ್‌’ ಅನ್ನು ಅಮೆರಿಕದ ‘ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರ (ಎನ್‌ಸಿಎಂಇಸಿ)’ ಸೃಷ್ಟಿ ಮಾಡುತ್ತದೆ. ಮಕ್ಕಳ ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುವುದು, ಅಪ್ಲೋಡ್‌ ಮಾಡುವುದರ ಮೇಲೆ ಎನ್‌ಸಿಎಂಇಸಿ ನಿಗಾವಹಿಸುತ್ತದೆ. ವೆಬ್‌ಸೈಟ್‌, ಸರ್ಚ್‌ ಎಂಜಿನ್‌, ಸಾಮಾಜಿಕ ಮಾಧ್ಯಮಗಳ ಮೇಲೆ ಎನ್‌ಸಿಎಂಇಸಿ ಕಣ್ಣಿಟ್ಟಿರುತ್ತದೆ.

ADVERTISEMENT

ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಸಹಾಯದಿಂದ ಎನ್‌ಸಿಎಂಇಸಿ ನಿಯಮಿತವಾಗಿ ಭಾರತದ ಎನ್‌ಸಿಆರ್‌ಬಿಯೊಂದಿಗೆ ವರದಿಗಳನ್ನು ಹಂಚಿಕೊಳ್ಳುತ್ತದೆ. ಅಂತಿಮವಾಗಿ ಅದನ್ನು ಎಲ್ಲಾ ರಾಜ್ಯಗಳ ಸೈಬರ್ ಪೊಲೀಸರಿಗೆ ನೀಡಲಾಗುತ್ತದೆ.

ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದವರ, ಹಂಚಿಕೊಂಡವರ ಐಪಿ ಅಡ್ರೆಸ್‌, ಲೋಕೇಷನ್‌ಗಳು ಟಿಪ್‌ಲೈನ್‌ ರಿಪೋರ್ಟ್‌ನಲ್ಲಿ ಇರುತ್ತವೆ. ಅದರ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುತ್ತಾರೆ.

ಮಕ್ಕಳ ಅಶ್ಲೀಲ ಚಿತ್ರಗಳನ್ನು ಹತ್ತಿಕ್ಕಲು ಮಹಾರಾಷ್ಟ್ರ ಪೊಲೀಸರು 2019-20ರಲ್ಲಿ ‘ಆಪರೇಷನ್ ಬ್ಲ್ಯಾಕ್‌ಫೇಸ್’ಅನ್ನು ಆರಂಭಿಸಿದರು. ಮಹಾರಾಷ್ಟ್ರಕ್ಕೆ 18 ತಿಂಗಳಲ್ಲಿ 11,122 ಟಿಪ್‌ಲೈನ್ ವರದಿಗಳು ಬಂದಿದ್ದು, ಈ ಪೈಕಿ 5,699 ವರದಿಗಳು ಪುಣೆಗೆ ಸಂಬಂಧಿಸಿದ್ದಾಗಿವೆ. 4,496 ವರದಿಗಳು ಮುಂಬೈಗೆ, 364 ಥಾಣೆ, 302 ನಾಗ್ಪುರಕ್ಕೆ, 90 ರಂಗಾಬಾದ್‌ಗೆ ಸಂಬಂಧಿಸಿದ್ದಾಗಿವೆ.

ನಾಗ್ಪುರ ಪೊಲೀಸರು 38 ಅಪರಾಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ‘ಟಿಪ್‌ ರಿಪೋರ್ಟ್‌’ ಆಧಾರದ ಮೇಲೆ ಮಹಾರಾಷ್ಟ್ರದಲ್ಲಿ ದಾಖಲಾದ ಅತಿ ಹೆಚ್ಚಿನ ಪ್ರಕರಣಗಳು ಇವಾಗಿವೆ.

ಮಕ್ಕಳ ಅಶ್ಲೀಲತೆಗೆ ಸಂಬಂಧಿತ ವಿಷಯವನ್ನು ಪ್ರಸಾರ ಮಾಡುವ ಜಿಲ್ಲೆಗಳನ್ನು ಮಹಾರಾಷ್ಟ್ರ ಸೈಬರ್‌ ಪೊಲೀಸರು ‘ಆಪರೇಷನ್ ಬ್ಲ್ಯಾಕ್‌ಫೇಸ್’ ಅಡಿಯಲ್ಲಿ ಗುರುತಿಸುತ್ತಿದ್ದಾರೆ.

ಕಳೆದ 18 ತಿಂಗಳಲ್ಲಿ ಕನಿಷ್ಠ 213 ಪ್ರಕರಣಗಳು ದಾಖಲಾಗಿವೆ. ಪೊಕ್ಸೊ ಕಾಯ್ದೆ, ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿ 105 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.