ADVERTISEMENT

ಪಶ್ಚಿಮ ಬಂಗಾಲದಲ್ಲಿ ಮೇಲೇಳದ ‘ಮೈತ್ರಿ’

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 19:30 IST
Last Updated 30 ಮಾರ್ಚ್ 2019, 19:30 IST
   

ಕೋಲ್ಕತ್ತ: ಪಶ್ಚಿಮ ಬಂಗಾಲದಲ್ಲಿ ಬಿಜೆಪಿಯೇತರ ಪಕ್ಷಗಳ ‘ಮಹಾಮೈತ್ರಿ’ ಬಹುತೇಕ ಸಮಾಧಿ ಆದಂತಾಗಿದೆ. ಎಡರಂಗ ಹಾಗೂ ಕಾಂಗ್ರೆಸ್‌ ನಡುವಿನ ಮೈತ್ರಿ ಸಾಧ್ಯತೆಗಳು ಮೊದಲೇ ಮುರಿದು ಬಿದ್ದಿದ್ದರೆ, ರಾಹುಲ್‌ ಗಾಂಧಿ ಈಚೆಗೆ ಮಮತಾ ಬ್ಯಾನರ್ಜಿ ವಿರುದ್ಧ ಮಾಡಿರುವ ಟೀಕೆ ಹಾಗೂ ಅದಕ್ಕೆ ಮಮತಾ ಕೊಟ್ಟ ಪ್ರತಿಕ್ರಿಯೆಯನ್ನು ಮೈತ್ರಿಯ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆ ಎಂದೇ ಪರಿಗಣಿಸಲಾಗುತ್ತಿದೆ.

ಮಾಲ್ಡಾದಲ್ಲಿ ಈಚೆಗೆ ಆಯೋಜಿಸಿದ್ದ ಕಾಂಗ್ರೆಸ್‌ ರ್‍ಯಾಲಿಯಲ್ಲಿ ಮಮತಾ ಅವರನ್ನು ತೀವ್ರ ಟೀಕೆಗೆ ಒಳಪಡಿಸಿದ್ದ ರಾಹುಲ್‌ ಗಾಂಧಿ, ‘ಭಾಷಣ ಮಾಡುವುದನ್ನು ಬಿಟ್ಟರೆ ರಾಜ್ಯದಲ್ಲಿ ಮಮತಾ ಏನನ್ನೂ ಮಾಡಿಲ್ಲ. ಮೋದಿ ಹಾಗೂ ಮಮತಾ ಅವರ ಕಾರ್ಯವೈಖರಿಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ’ ಎಂದಿದ್ದರು.

ಈ ಟೀಕೆಗೆ ಮಾಧ್ಯಮಗಳ ಮೂಲಕ ಅಷ್ಟೇ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಮಮತಾ, ‘ರಾಹುಲ್‌ ಇನ್ನೂ ಮಗು. ಮಕ್ಕಳು ಆಡುವ ಮಾತುಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದಿದ್ದರು. ಈ ಪ್ರತಿಕ್ರಿಯೆಯಿಂದ ರಾಜ್ಯದ ಕಾಂಗ್ರೆಸ್‌ ದಂಗಾಗಿ ಹೋಗಿತ್ತು.

ADVERTISEMENT

ಬಿಜೆಪಿ ವಿರುದ್ಧ ಇತರ ಎಲ್ಲಾ ಪಕ್ಷಗಳನ್ನು ಒಗ್ಗಟ್ಟಾಗಿಸುವ ಮಮತಾ ಬ್ಯಾನರ್ಜಿ ಅವರ ಪ್ರಯತ್ನಕ್ಕೆ ಆರಂಭದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಕ್ರಮೇಣ, ಪಶ್ಚಿಮ ಬಂಗಾಳದ ಎಲ್ಲ 42 ಲೋಕಸಭಾ ಕ್ಷೇತ್ರಗಳಲ್ಲೂ ಟಿಎಂಸಿ ಅಭ್ಯರ್ಥಿಗನ್ನು ಗೆಲ್ಲಿಸುವ ಪ್ರಯತ್ನವನ್ನು ಮಮತಾ ಆರಂಭಿಸಿದರು. ಇದರಿಂದ ರಾಜ್ಯದ ರಾಜಕೀಯ ಚಿತ್ರಣ ಬದಲಾಗಲಾರಂಭಿಸಿತು.

ಕಾಂಗ್ರೆಸ್‌– ಟಿಎಂಸಿ ನಡುವಿನ ಮೈತ್ರಿ ಸಾಧ್ಯತೆಗಳು ಈಗ ಪೂರ್ಣ ಪ್ರಮಾಣದಲ್ಲಿ ಮುರಿದು ಬಿದ್ದಿರುವುದರಿಂದ ಬಿಜೆಪಿಗೆ ಇಲ್ಲಿ ಅನುಕೂಲವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

‘ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಈಗ ಮೈತ್ರಿ ಸಾಧ್ಯತೆಯೂ ಇಲ್ಲವಾಗಿರುವುದರಿಂದ ಬಿಜೆಪಿಗೆ ಖಂಡಿತವಾಗಿಯೂ ಅನುಕೂಲ ಆಗುತ್ತದೆ’ ಎಂದು ರಾಜ್ಯದ ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ಪ್ರಿಯಾಂಕಾಗೆ ಆಹ್ವಾನ

ಪಶ್ಚಿಮ ಬಂಗಾಳದಲ್ಲಿ ಏಕಾಂಗಿ ಹೋರಾಟ ನಡೆಸಲು ನಿರ್ಧರಿಸಿರುವ ಕಾಂಗ್ರೆಸ್‌, ಪ್ರಚಾರಕ್ಕಾಗಿ ಪಕ್ಷದ ತಾರಾ ಪ್ರಚಾರಕಿ ಪ್ರಿಯಾಂಕಾ ಗಾಂಧಿಯನ್ನು ಕರೆತರುವ ಪ್ರಯತ್ನ ಮಾಡುತ್ತಿದೆ. ‘ಪ್ರಿಯಾಂಕಾ ಅವರನ್ನು ರಾಜ್ಯಕ್ಕೆ ಕಳುಹಿಸುವಂತೆ ಹೈಕಮಾಂಡ್‌ಗೆ ಮನವಿ ಸಲ್ಲಿಸಲಾಗಿದೆ’ ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ಮಹಾಮೈತ್ರಿ ಮುರಿದು ಬಿದ್ದಿರುವುದರಿಂದ ಬಿಜೆಪಿ, ಟಿಎಂಸಿ, ಕಾಂಗ್ರೆಸ್ ಹಾಗೂ ಸಿಪಿಎಂ ನಡುವೆ ಚತುಷ್ಕೋನ ಸ್ಪರ್ಧೆ ಏರ್ಪಡಲಿದೆ.

‘ಹಲವು ವರ್ಷಗಳಿಂದ ನಾವು (ಕಾಂಗ್ರೆಸ್‌) ಟಿಎಂಸಿಯ ಟೀಕೆ ಮತ್ತು ದಾಳಿಗೆ ಒಳಗಾಗಿದ್ದೇವೆ. ಪ್ರಿಯಾಂಕಾ ರಾಜ್ಯಕ್ಕೆ ಬಂದು ಮಮತಾ ವಿರುದ್ಧ ವಾಗ್ದಾಳಿ ನಡೆಸಿದರೆ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಬರುತ್ತದೆ’ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ದುರ್ಬಲವಾಗಿದ್ದು, ಪ್ರಿಯಾಂಕಾ ಅವರನ್ನು ಆಹ್ವಾನಿಸುವ ಮೂಲಕ ಸಂಘಟನೆಯನ್ನು ಬಲಪಡಿಸಲು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸೋಮೇನ್‌ ಮಿತ್ರ ಶ್ರಮಿಸುತ್ತಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.