ಭೂತಾನ್ ದೊರೆ ಜಿಗ್ಮೆ ಖೇಸರ್ ನಮ್‌ಗ್ಯಾಲ್ ವಾಂಗ್ಚುಕ್ ಮತ್ತು ಯೋಗಿ ಆದಿತ್ಯನಾಥ ಅವರು ಪವಿತ್ರ ಸ್ನಾನ ಮಾಡಿದರು
–ಪಿಟಿಐ ಚಿತ್ರ
ಮಹಾಕುಂಭ ನಗರ: ಭೂತಾನ್ ದೊರೆ ಜಿಗ್ಮೆ ಖೇಸರ್ ನಮ್‌ಗ್ಯಾಲ್ ವಾಂಗ್ಚುಕ್ ಅವರು ಮಂಗಳವಾರ ಮಹಾಕುಂಭ ಮೇಳಕ್ಕೆ ಭೇಟಿ ನೀಡಿದರಲ್ಲದೆ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
ಪವಿತ್ರ ಸ್ನಾನಕ್ಕೂ ಮುನ್ನ ಅವರು ಸೂರ್ಯನಿಗೆ ಅರ್ಘ್ಯ ಸಮರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ಮಾಡಿದರು. ವಾಂಗ್ಚುಕ್ ಅವರು ಥಿಂಪುವಿನಿಂದ ಸೋಮವಾರ ಲಖನೌಗೆ ಬಂದಿಳಿದಿದ್ದರು. ಭೂತಾನ್‌ನ ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದಿದ್ದ ಅವರು ಮಹಾಕುಂಭ ಮೇಳಕ್ಕೆ ಬರುವಾಗ ಕೇಸರಿ ಬಣ್ಣದ ಕುರ್ತಾ ಮತ್ತು ಪೈಜಾಮ ಧರಿಸಿದ್ದರು.
ವಾಂಗ್ಚುಕ್ ಅವರು ಪವಿತ್ರ ಸ್ನಾನ ಮಾಡುವಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಸಚಿವರಾದ ಸ್ವತಂತ್ರ ದೇವ್ ಸಿಂಗ್ ಮತ್ತು ನಂದಗೋಪಾಲ್ ಗುಪ್ತಾ ಹಾಗೂ ವಿಷ್ಣುಸ್ವಾಮಿ ಪಂಥದ ಮುಖಂಡ ಜಗದ್ಗುರು ಸಂತೋಷ್ ದಾಸ್ ಮಹಾರಾಜ್ ಅವರು ಜತೆಗಿದ್ದರು.
ಪವಿತ್ರ ಸ್ನಾನದ ಬಳಿಕ ಭೂತಾನ್ ದೊರೆ, ‘ಅಕ್ಷಯವಟ’ ಮತ್ತು ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಸೋಮವಾರ ಅವರು ರಾಜಭವನದಲ್ಲಿ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರನ್ನೂ ಭೇಟಿಯಾಗಿದ್ದರು. ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಅವರು ಭಾರತ– ಭೂತಾನ್ ದ್ವಿಪಕ್ಷೀಯ ಸಂಬಂಧದ ಬಗ್ಗೆಯೂ ವಾಂಗ್ಚುಕ್ ಜತೆ ಮಾತುಕತೆ ನಡೆಸಿದ್ದರು.
‘ಭೂತಾನ್ ದೊರೆಯ ಭೇಟಿಯು ಭಾರತ-ಭೂತಾನ್ ಬಾಂಧವ್ಯ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ’ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಮಹಾಕುಂಭ ಮೇಳದ ಮೂರನೇ ‘ಅಮೃತ ಸ್ನಾನ’ ತ್ರಿವೇಣಿ ಸಂಗಮದಲ್ಲಿ ಸೋಮವಾರ ಸುಸೂತ್ರವಾಗಿ ನಡೆಯಿತು. ದೇಶದ ವಿವಿಧ ಭಾಗಗಳು ಮತ್ತು ವಿದೇಶಗಳ ಲಕ್ಷಾಂತರ ಭಕ್ತರು ‘ವಸಂತ ಪಂಚಮಿ’ಯ ಪವಿತ್ರ ಸ್ನಾನದಲ್ಲಿ ಪಾಲ್ಗೊಂಡಿದ್ದರು.
ಜನವರಿ 29ರಂದು ‘ಮೌನಿ ಅಮಾವಾಸ್ಯೆ’ ದಿನ ನಡೆದ ಅಮೃತ ಸ್ನಾನದ ವೇಳೆ ಉಂಟಾದ ಕಾಲ್ತುಳಿತ ದಲ್ಲಿ 30 ಭಕ್ತರು ಮೃತಪಟ್ಟಿದ್ದರು. ಇಂಥ ಅವಘಡಗಳು ಮರುಕಳಿಸದಿರಲಿ ಎಂದು ಕುಂಭಮೇಳದ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದರು.
ಉತ್ತರ ಪ್ರದೇಶ ಸರ್ಕಾರವು ಮೇಳದ ವಲಯದ ವ್ಯವಸ್ಥೆಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿತ್ತು. ದಟ್ಟಣೆ ನಿರ್ವಹಣೆ ಹಾಗೂ ಭಕ್ತರ ಸುರಕ್ಷತೆ ಖಾತ್ರಿಪಡಿಸುವ ಉದ್ದೇಶದಿಂದ ಹಲವಾರು ಕ್ರಮಗಳನ್ನು ತೆಗೆದು ಕೊಂಡಿತ್ತು. ಇದರಿಂದ ಸೋಮವಾರ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.