ADVERTISEMENT

Maha Kumbh Stampede | ಕಾಲ್ತುಳಿತಕ್ಕೆ ಕೇಂದ್ರ, ಯೋಗಿ ಸರ್ಕಾರ ಹೊಣೆ: ಖರ್ಗೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 5:26 IST
Last Updated 29 ಜನವರಿ 2025, 5:26 IST
<div class="paragraphs"><p>ಕುಂಭಮೇಳದಲ್ಲಿ ಕಾಲ್ತುಳಿತ, ಮಲ್ಲಿಕಾರ್ಜುನ ಖರ್ಗೆ</p></div>

ಕುಂಭಮೇಳದಲ್ಲಿ ಕಾಲ್ತುಳಿತ, ಮಲ್ಲಿಕಾರ್ಜುನ ಖರ್ಗೆ

   

(ಪಿಟಿಐ ಚಿತ್ರಗಳು)

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಾಗುತ್ತಿರುವ ಮಹಾಕುಂಭಮೇಳದ ಮೌನಿ ಅಮಾವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಸಂಭವಿಸಿರುವ ಕಾಲ್ತುಳಿತ ಅವಘಡದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಉತ್ತರ ಪ್ರದೇಶದ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ADVERTISEMENT

ಮಹಾಕುಂಭಮೇಳವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವೈಫಲ್ಯ ಕಂಡಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಮೌನಿ ಅಮಾವಾಸ್ಯೆ ದಿನವಾದ ಇಂದು (ಬುಧವಾರ) ತ್ರಿವೇಣಿ ಸಂಗಮದಲ್ಲಿ ಪ್ರವಿತ್ರ ಸ್ನಾನ ಮಾಡಲು ಲಕ್ಷಾಂತರ ಮಂದಿ ಪ್ರಯಾಗ್‌ರಾಜ್‌ನಲ್ಲಿ ಜಮಾಯಿಸಿದ್ದಾರೆ. ಈ ನಡುವೆ ಉಂಟಾದ ಕಾಲ್ತುಳಿತದಲ್ಲಿ ಹಲವರು ಮೃತಪಟ್ಟಿರುವ ಹಾಗೂ ಅನೇಕ ಮಂದಿ ಗಾಯಗೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸಾವು-ನೋವಿನ ಬಗ್ಗೆ ಅಧಿಕೃತ ವರದಿ ಇನ್ನಷ್ಟೇ ಬರಬೇಕಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ, 'ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ಅನೇಕ ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸುತ್ತೇನೆ' ಎಂದು ಹೇಳಿದ್ದಾರೆ.

ಸಂತ್ರಸ್ತರಿಗೆ ನೆರವಾಗುವಂತೆಯೂ ಕಾಂಗ್ರೆಸ್ ಕಾರ್ಯಕರ್ತರಿಗೆ ಖರ್ಗೆ ಕರೆ ನೀಡಿದ್ದಾರೆ.

'ಸಮರ್ಪಕ ವ್ಯವಸ್ಥೆ ಇಲ್ಲದೇ ಇರುವುದು, ವಿಐಪಿ ಚಲನವಲನ, ಸ್ವಯಂ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಮತ್ತು ಕೆಟ್ಟ ನಿರ್ವಹಣೆಯೇ ಕಾಲ್ತುಳಿತ ಅವಘಡಕ್ಕೆ ಕಾರಣವಾಗಿದೆ. ಸಾವಿರಾರು ಕೋಟಿ ರೂಪಾಯಿ ವ್ಯಯ ಮಾಡಿದರೂ ಇಂತಹ ಕೆಟ್ಟ ವ್ಯವಸ್ಥೆ ಮಾಡಿರುವುದು ನಿಜಕ್ಕೂ ಖಂಡನಾರ್ಹ' ಎಂದು ಅವರು ಆರೋಪಿಸಿದ್ದಾರೆ.

'ಇನ್ನೂ ಅನೇಕ 'ಪವಿತ್ರ ಸ್ನಾನ' ಬಾಕಿಯಿವೆ. ಈಗಲಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಭವಿಷ್ಯದಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯದಂತೆ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಿದೆ' ಎಂದು ಅವರು ಆಗ್ರಹಿಸಿದ್ದಾರೆ.

'ಭಕ್ತಾದಿಗಳ ವಸತಿ, ಆಹಾರ, ಪ್ರಥಮ ಚಿಕಿತ್ಸೆ, ಸಂಚಾರ ಇತ್ಯಾದಿ ವ್ಯವಸ್ಥೆಗಳಲ್ಲಿ ಸುಧಾರಣೆ ತರಬೇಕು. ವಿಐಪಿ ಚಲನವಲನಕ್ಕೆ ಲಗಾಮು ಹಾಕಬೇಕು. ನಮ್ಮ ಸಾಧು ಸಂತರು ಅದನ್ನೇ ಬಯಸುತ್ತಾರೆ' ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.