ADVERTISEMENT

Maha Kumbh Stampede | ಪಿತೂರಿ ಶಂಕೆ: 16 ಸಾವಿರ ಮೊಬೈಲ್ ಸಂಖ್ಯೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 13:09 IST
Last Updated 2 ಫೆಬ್ರುವರಿ 2025, 13:09 IST
<div class="paragraphs"><p>ಉತ್ತರ ಪ್ರದೇಶ ಪೊಲೀಸರು</p></div>

ಉತ್ತರ ಪ್ರದೇಶ ಪೊಲೀಸರು

   

-‍ಪಿಟಿಐ ಚಿತ್ರ

ಲಖನೌ: ಪ್ರಯಾಗ್‌ರಾಜ್‌ನ ಮಹಾಕುಂಭದಲ್ಲಿ ಮೌನಿ ಅಮಾವಾಸ್ಯೆ ದಿನ (ಜ. 29) ಅಮೃತ ಸ್ನಾನದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿವು ‘ಪಿತೂರಿ’ಯ ಭಾಗವಾಗಿತ್ತೇ ಎಂಬುದರ ನಿಟ್ಟಿನಲ್ಲೂ ಉತ್ತರ ಪ್ರದೇಶದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ADVERTISEMENT

ಆ ದಿನ ನಡೆದ ಕಾಲ್ತುಳಿತದಲ್ಲಿ 30 ಭಕ್ತರು ಮೃತಪಟ್ಟು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

‘ಮಧ್ಯರಾತ್ರಿ ಕಾಲ್ತುಳಿತ ಸಂಭವಿಸಿದ ವೇಳೆ ಸಕ್ರಿಯವಾಗಿದ್ದ ಸಹಸ್ರಾರು ಮೊಬೈಲ್‌ ಫೋನ್‌ ಸಂಖ್ಯೆಗಳ ದತ್ತಾಂಶವನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ವಿಶ್ಲೇಷಿಸುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ತನಿಖೆಯ ಭಾಗವಾಗಿ ಸುಮಾರು 16 ಸಾವಿರ ಮೊಬೈಲ್‌ ಫೋನ್‌ ಸಂಖ್ಯೆಗಳ ದತ್ತಾಂಶವನ್ನು ಪರಿಶೀಲಿಸಲಾಗುತ್ತಿದೆ. ಇವುಗಳಲ್ಲಿ ಬಹುತೇಕ ಸಂಖ್ಯೆಗಳು ದುರಂತದ ಬಳಿಕ ಸ್ವಿಚ್ಡ್‌ಆಫ್‌ ಆಗಿವೆ’ ಎಂದು ಮೂಲಗಳು ಮಾಹಿತಿ ನೀಡಿವೆ.

‘ಕಾಲ್ತುಳಿತವು ಪಿತೂರಿಯಿಂದ ಸಂಭವಿಸಿತ್ತೇ ಎಂಬ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದೇವೆ’ ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನೂಕುನುಗ್ಗಲು ಉಂಟಾದ ರಾತ್ರಿ ಭಕ್ತರನ್ನು ಉದ್ದೇಶಪೂರ್ವಕವಾಗಿ ಮುಂದಕ್ಕೆ ತಳ್ಳಿದ ಯುವಕರ ಗುಂಪನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ಸಂಬಂಧ ಮಹಾಕುಂಭದಲ್ಲಿ ಬಳೆಗಳು ಮತ್ತು ಪೂಜಾ ಸಾಮಗ್ರಿಗಳನ್ನು ಮಾರುವವರನ್ನು ಪ್ರಶ್ನಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ವಿಶ್ಲೇಷಿಸಲಾಗುತ್ತಿದೆ. ಚಹರೆ ಗುರುತಿಸುವ ಆ್ಯಪ್‌ ನೆರವನ್ನು ಪಡೆದು ಅವರನ್ನು ಗುರುತಿಸಲು ಯತ್ನಿಸುತ್ತಿದ್ದೇವೆ’ ಎಂದು ಅಧಿಕಾರಿ ಹೇಳಿದ್ದಾರೆ.

ವಸಂತ ಪಂಚಮಿಯತ್ತ ಗಮನ:

‘ಸದ್ಯ ನಾವು ವಸಂತ ಪಂಚಮಿಯ ದಿನ ನಡೆಯುವ ಮೂರನೇ ಅಮೃತ ಸ್ನಾನದತ್ತ (ಸೋಮವಾರ) ಗಮನ ಕೇಂದ್ರೀಕರಿಸಿದ್ದೇವೆ. ಆ ದಿನ ಯಾವುದೇ ಅವಘಡಗಳು ನಡೆಯದಂತೆ ಎಚ್ಚರವಹಿಸಿದ್ದೇವೆ. ಆ ಬಳಿಕ ತನಿಖೆ ವೇಗ ಪಡೆದುಕೊಳ್ಳಲಿದೆ’ ಎಂದು ಅವರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.