ADVERTISEMENT

ಹೃತಿಕ್ ರೋಷನ್ ನಟನೆಯ ಜೊಮಾಟೊ ಜಾಹೀರಾತಿನಲ್ಲಿ ಹಿಂದೂಗಳ ಭಾವನೆಗೆ ದಕ್ಕೆ: ಆರೋಪ

ಪಿಟಿಐ
Published 21 ಆಗಸ್ಟ್ 2022, 12:57 IST
Last Updated 21 ಆಗಸ್ಟ್ 2022, 12:57 IST
ಜೊಮಾಟೊ ಜಾಹೀರಾತಿನಲ್ಲಿ ಹೃತಿಕ್ ರೋಷನ್
ಜೊಮಾಟೊ ಜಾಹೀರಾತಿನಲ್ಲಿ ಹೃತಿಕ್ ರೋಷನ್   

ಬೆಂಗಳೂರು: 12 ಜ್ಯೋತಿರ್ಲಿಂಗಗಳಲ್ಲಿ ಪ್ರಮುಖವಾದ ಉಜ್ಜೈನಿಯ ಮಹಾಕಾಲ ದೇವಸ್ಥಾನದ ಬಗ್ಗೆ ಆನ್‌ಲೈನ್ ಫುಡ್ ಡೆಲಿವರಿ ಕಂಪನಿ ಜೊಮಾಟೊ ಅವಹೇಳನಕಾರಿ ಜಾಹೀರಾತನ್ನು ಪ್ರಸಾರ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಜಾಹೀರಾತಿನಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಹೃತಿಕ್ ರೋಷನ್ ಕಾಣಿಸಿಕೊಂಡಿದ್ದಾರೆ.

30 ಸೆಕೆಂಡುಗಳ ಈ ಜಾಹೀರಾತಿನಲ್ಲಿ ಹೃತಿಕ್ ರೋಷನ್ ಅವರು, ‘ನನಗೆ ಪನ್ನೀರ್ ಥಾಲಿ ತಿನ್ನೋ ಹಾಗೇ ಆಗಿತ್ತು. ಇದನ್ನು ಮಹಾಕಾಲದಿಂದ ಆರ್ಡರ್ ಮಾಡಿದೆ’ ಎಂದು ವಿಡಿಯೊದಲ್ಲಿ ಹೇಳುತ್ತಾರೆ ಎಂದು ಆರೋಪಿಸಲಾಗಿದೆ.

ADVERTISEMENT

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಹಾಕಾಲ ದೇವಸ್ಥಾನದ ಮುಖ್ಯ ಪೂಜಾರಿ ಅವರು, ‘ಜೊಮಾಟೊ ಜಾಹೀರಾತು ಹಿಂದುಗಳ ಭಾವನೆಗೆ ದಕ್ಕೆ ತಂದಿದೆ. ಮಹಾಕಾಲದಲ್ಲಿ ಥಾಲಿಯನ್ನು ಆನ್‌ಲೈನ್ ಡೆಲಿವರಿ ಮಾಡುವುದಿಲ್ಲ. ಭಕ್ತರ ಪ್ರಸಾದವದು. ಪ್ರಸಾದದ ಬಗ್ಗೆ ಈ ರೀತಿಯ ಅಸಹ್ಯಕರ ಜಾಹೀರಾತನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಹಿಂದೂಗಳ ಭಾವನೆಗೆ ದಕ್ಕೆ ತಂದಿರುವ ಆರೋಪದ ಮೇಲೆ ಕೆಲವರು ಜೊಮಾಟೊ ಬಹಿಷ್ಕರಿಸಿ ಎಂದು ಟ್ವಿಟರ್‌ನಲ್ಲಿ ಕರೆ ನೀಡಿದ್ದರು.

ಈ ನಂತರ ಸ್ಪಷ್ಟನೆ ನೀಡಿರುವ ಜೊಮಾಟೊ, ‘ಮಹಾಕಾಲದ ಉಲ್ಲೇಖ ಮಾಡಿರುವುದು ಅದೊಂದು ರೆಸ್ಟೊರಂಟ್ ಎಂದು, ದೇವಸ್ಥಾನವಲ್ಲ. ಹಿಂದು ಹಾಗೂ ಹಿಂದು ದೇವಾಲಯಗಳ ಬಗ್ಗೆ ನಮಗೆ ಅಪಾರ ಗೌರವವಿದೆ’ ಎಂದು ಜೊಮಾಟೊ ಹೇಳಿದೆ. ನಂತರ ಜಾಹೀರಾತಿನಲ್ಲಿ ಮಹಾಕಾಲ ಎನ್ನುವ ಪದವನ್ನು ತೆಗೆದು ಮಾರ್ಪಡಿಸಿ ಯುಟ್ಯೂಬ್‌ನಲ್ಲಿ ಹಾಕಿದೆ.

ಉಜ್ಜೈನಿಯ ಮಹಾಕಾಲ ದೇವಸ್ಥಾನದಲ್ಲಿ ಉಚಿತವಾಗಿ ನೀಡುವಥಾಲಿ ಪ್ರಸಾದ ಆ ಭಾಗದಲ್ಲಿ ಬಹು ಜನಪ್ರಿಯವಾದದ್ದು ಎನ್ನಲಾಗಿದೆ.

ಇನ್ನುಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಕೂಡ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು, ಜೊಮಾಟೊ ಹಾಗೂ ನಟ ಹೃತಿಕ್ ರೋಷನ್ ವಿರುದ್ಧ ‍ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.