ಮುಂಬೈ: ಮಹಾರಾಷ್ಟ್ರದ ಖ್ಯಾತಿಗೆ ಮಸಿ ಬಳಿಯುವ ಪಿತೂರಿಯನ್ನು ಕೆಲವರು ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ತಿಳಿಸಿದ್ದಾರೆ.
ಈ ಬಗ್ಗೆ ಮುಂಬೈನಲ್ಲಿ ಮಾತನಾಡಿರುವ ಅವರು,' ಈಗ ಕೊರೊನಾ ಸೋಂಕು ಹರಡುವುದು ನಿಂತಿದೆ ಎಂದು ಕೆಲವರು ಭಾವಿಸಿರಬಹುದು. ಅವರು ಮತ್ತೆ ತಮ್ಮ ರಾಜಕಾರಣವನ್ನು ಪ್ರಾರಂಭಿಸಬೇಕಿದೆ. ನಾನೀಗ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಆದರೆ, ಮಹಾರಾಷ್ಟ್ರದ ಖ್ಯಾತಿಗೆ ಮಸಿ ಬಳಿಯುವ ಪಿತೂರಿ ನಡೆಯುತ್ತಿದೆ. ನಾನು ಮೌನವಾಗಿದ್ದೇನೆ. ಅದರ ಅರ್ಥ ನನ್ನ ಬಳಿ ಉತ್ತರಗಳಿಲ್ಲ ಎಂದಲ್ಲ' ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ 10 ಲಕ್ಷಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳ ಕಂಡುಬಂದಿವೆ. ಮುಂಬೈ ಮಹಾನಗರ ಪಾಲಿಕೆಯು ಬಾಲಿವುಡ್ ನಟಿ ಕಂಗನಾ ರನೌತ್ ಅವರ ಕಚೇರಿಯನ್ನು ನೆಲಸಮಗೊಳಿಸಿದ ನಂತರ ದೊಡ್ಡ ಮಟ್ಟದ ವಿವಾದವೂ ಹುಟ್ಟಿಕೊಂಡಿದೆ. ಆ ಹಿನ್ನೆಲೆಯಲ್ಲಿ ಯಾರ ಹೆಸರನ್ನೂ ಹೇಳದೇ ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.
ರಾಜಕೀಯ ಚಂಡಮಾರುತವನ್ನು ಎದುರಿಸಲು ತಾನು ಸಿದ್ಧ ಎಂದಿರುವ ಠಾಕ್ರೆ, 'ಯಾವುದೇ ರಾಜಕೀಯ ಬಿರುಗಾಳಿಗಳು ಬಂದರೂ, ಅವುಗಳನ್ನು ನಾನು ಎದುರಿಸುತ್ತೇನೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧವೂ ನಾನು ಹೋರಾಡುತ್ತೇನೆ' ಎಂದು ಅವರು ಜನರಿಗೆ ಭರವಸೆ ನೀಡಿದ್ದಾರೆ.
ಕೋವಿಡ್ ವಿರುದ್ಧ ಹೋರಾಡಲು 'ನನ್ನ ಕುಟುಂಬ-ನನ್ನ ಜವಾಬ್ದಾರಿ' ಅಭಿಯಾನವನ್ನು ನಾವು ಪ್ರಾರಂಭಿಸುತ್ತಿದ್ದೇವೆ ಎಂದು ಠಾಕ್ರೆ ಇದೇ ವೇಳೆ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಒಟ್ಟಾರೆ 10,37,765 ಜನರಿಗೆ ಸೋಂಕು ತಗುಲಿದ್ದರೆ, 7,28,512 ಗುಣಮುಖರಾಗಿದ್ದಾರೆ. ಈವರೆಗೂ 29,115 ಜನರು ಸಾವಿಗೀಡಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.