ADVERTISEMENT

ನಟ ಸುಶಾಂತ್‌ ಸಾವಿನ ತನಿಖೆ: ಮಹಾರಾಷ್ಟ್ರದಲ್ಲಿ ರಾಜಕೀಯ ನಾಯಕರ ವಾಕ್ಸಮರ

ಏಜೆನ್ಸೀಸ್
Published 1 ಆಗಸ್ಟ್ 2020, 3:16 IST
Last Updated 1 ಆಗಸ್ಟ್ 2020, 3:16 IST
ನಟ ಸುಶಾಂತ್ ಸಿಂಗ್‌ ರಜಪೂತ್‌
ನಟ ಸುಶಾಂತ್ ಸಿಂಗ್‌ ರಜಪೂತ್‌   

ಮುಂಬೈ:ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ತನಿಖೆಯನ್ನು ಮಹಾರಾಷ್ಟ್ರ ಸರ್ಕಾರ ಸಿಬಿಐಗೆ ವಹಿಸಲು ಹಿಂಜರಿಯುತ್ತಿದೆ ಎಂದು ವಿರೋಧ ಪಕ್ಷದ ನಾಯಕದೇವೇಂದ್ರ ಫಡಣವೀಸ್‌ ನೀಡಿರುವ ಹೇಳಿಕೆಯ ವಿರುದ್ಧಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹರಿಹಾಯ್ದಿದ್ದಾರೆ.

ಸುಶಾಂತ್‌ ಸಿಂಗ್‌ ಆತ್ಮಹತ್ಯೆಯ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ದಕ್ಷತೆ ಹಾಗೂ ಕಾರ್ಯಕ್ಷಮತೆಯನ್ನು ಅನುಮಾನಿಸುವುದು ಸರಿಯಲ್ಲ ಎಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಕೊರೊನಾ ವಿರುದ್ಧದ ಹೋರಾಟದ ನಡುವೆಯೇ ಮುಂಬೈ ಪೊಲೀಸರು ಸುಶಾಂತ್‌ ತನಿಖೆಯನ್ನು ಪ್ರಾಮಾಣಿಕವಾಗಿ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಸುಶಾಂತ್‌ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂಬುದು ಬಹುತೇಕ ಸಾರ್ವಜನಿಕರ ಭಾವನೆಯಾಗಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ಅದನ್ನು ಸಿಬಿಐಗೆ ವಹಿಸಲು ಹಿಂಜರಿಯುತ್ತಿದೆ’ ಎಂದು ದೇವೇಂದ್ರ ಫಡಣವೀಸ್‌ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉದ್ಧವ್‌ ಠಾಕ್ರೆ 'ಪ್ರಕರಣದಲ್ಲಿ ರಾಜಕೀಯ ಬೆರೆಸುವುದು ಅತ್ಯಂತ ಶೋಚನೀಯ ವಿಷಯ' ಎಂದಿದ್ದಾರೆ.

'ಮುಂಬೈ ಪೊಲೀಸರು ಅಸಮರ್ಥರಾಗಿಲ್ಲ. ಯಾರಾದರೂ ಯಾವುದೇ ಪುರಾವೆ ಹೊಂದಿದ್ದರೆ ಅದನ್ನು ನಮ್ಮ ಬಳಿಗೆ ತರಬಹುದು. ನಾವು ತಪ್ಪಿತಸ್ಥರನ್ನು ವಿಚಾರಣೆಗೊಳಪಡಿಸಿ, ಶಿಕ್ಷಿಸುತ್ತೇವೆ. ಮಹಾರಾಷ್ಟ್ರ ಮತ್ತು ಬಿಹಾರದ ನಡುವೆ ಘರ್ಷಣೆ ಸೃಷ್ಟಿಸಲು ದಯವಿಟ್ಟು ಈ ಪ್ರಕರಣವನ್ನು ಬಳಸಿಕೊಳ್ಳಬೇಡಿ' ಎಂದು ಉದ್ಧವ್‌ ತಿಳಿಸಿದ್ದಾರೆ.

'ಮುಂಬೈ ಪೊಲೀಸರು ಈ ಪ್ರಕರಣದ ತನಿಖೆಯನ್ನು ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಸಿಬಿಐಗೆ ವಹಿಸುವ ಅಗತ್ಯವಿಲ್ಲ' ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಇತ್ತೀಚೆಗೆ ಹೇಳಿದ್ದರು.

ಸುಶಾಂತ್‌‌ ಆತ್ಮಹತ್ಯೆ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 40 ಜನರ ವಿಚಾರಣೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.