ADVERTISEMENT

ಚೀಸ್ ಬದಲು ಡಾಲ್ಡಾ ಬಳಕೆ; ಮೆಕ್‌ಡೊನಾಲ್ಡ್ಸ್‌ ಮಳಿಗೆ ಪರವಾನಗಿ ರದ್ದು ಮಾಡಿದ FDA

ಏಜೆನ್ಸೀಸ್
Published 24 ಫೆಬ್ರುವರಿ 2024, 15:49 IST
Last Updated 24 ಫೆಬ್ರುವರಿ 2024, 15:49 IST
   

ಮುಂಬೈ: ಆಹಾರ ಮಳಿಗೆ ಸರಣಿ ಮೆಕ್‌ಡೊನಾಲ್ಡ್ಸ್‌ನಲ್ಲಿ ಸಿದ್ಧಪಡಿಸಿದ್ದ ಬರ್ಗರ್‌ ಹಾಗೂ ನಗೆಟ್ಸ್‌ಗೆ ನೈಜ ಚೀಸ್ ಬದಲು ಬೇರೆ ಪದಾರ್ಥ ಬಳಸಿದ್ದನ್ನು ಪತ್ತೆ ಮಾಡಿರುವುದಾಗಿ ಹೇಳಿರುವ ಮಹಾರಾಷ್ಟ್ರದ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆಯು (ಎಫ್‌ಡಿಎ), ಅಹಮದ್‌ನಗರದ ಮಳಿಗೆಯ ಪರವಾನಗಿ ರದ್ದುಪಡಿಸಿದೆ.

ಈ ಕುರಿತು ಮಾಹಿತಿ ನೀಡಿದ ಎಫ್‌ಡಿಎ ಆಯುಕ್ತ ಅಭಿಮನ್ಯು ಕಾಳೆ, ‘ಅಸಲಿ ಚೀಸ್‌ ಬದಲು ಡಾಲ್ಡಾ ಬಳಸುತ್ತಿರುವ ಕುರಿತು ಗ್ರಾಹಕರಿಂದ ಸಾಕಷ್ಟು ದೂರುಗಳು ಬಂದಿದ್ದವು. ಖುದ್ದು ಹೋಗಿ ಪರಿಶೀಲಿಸಿದಾಗ ಇದು ಖಾತ್ರಿಯಾಯಿತು. ಡಾಲ್ಡಾ ಬಳಸುತ್ತಿದ್ದರೂ, ಚೀಸ್ ಬಳಸುತ್ತಿರುವುದಾಗಿ ಮಳಿಗೆಯು ತಮ್ಮ ಆಹಾರ ಪಟ್ಟಿಯಲ್ಲಿ ನಮೂದಿಸಿತ್ತು’ ಎಂದಿದ್ದಾರೆ.

'ಗ್ರಾಹಕರ ಆರೋಗ್ಯದ ಕಾಳಜಿಯೇ ಆಹಾರ ಸುರಕ್ಷತಾ ಇಲಾಖೆಯ ಕರ್ತವ್ಯ. ಅಹಮದ್‌ನಗರದ ಮಳಿಗೆಯಲ್ಲಿ ಎಫ್‌ಡಿಎ ತಪಾಸಣೆ ಕೈಗೊಂಡ ಸಂದರ್ಭದಲ್ಲಿ ತಮ್ಮ ಆಹಾರ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಲಾಯಿತು’ ಎಂದಿದ್ದಾರೆ.

ADVERTISEMENT

‘ಆಹಾರ ಪಟ್ಟಿಯಲ್ಲಿ ಏನು ನಮೂದಿಸಲಾಗಿದೆಯೋ ಮತ್ತು ಅವುಗಳಿಗೆ ಬಳಸುವ ಪದಾರ್ಥಗಳು ಏನಿವೆಯೋ ಅವೇ ಇರಬೇಕು. ಚೀಸ್‌ ಎಂದು ಬಳಸಿದ್ದರೆ ಅದರಲ್ಲಿ ಶೇ 100ರಷ್ಟು ಹಾಲಿನಿಂದಲೇ ತಯಾರಿಸಿದ ಚೀಸ್ ಇರಬೇಕು. ಹೀಗಾಗಿ ಅವರು ಬಳಸುವ ಪದಾರ್ಥದಲ್ಲಿ ಚೀಸ್ ಇಲ್ಲವೆಂದಾದಲ್ಲಿ ಆ ಪದವನ್ನು ಬಳಸಬಾರದು ಎಂದು ತಾಕೀತು ಮಾಡಲಾಗಿದೆ’ ಎಂದಿದ್ದಾರೆ.

‘ಪರ್ಯಾಯ ಚೀಸ್‌ನಲ್ಲಿ ಶೇ 50ರಿಂದ ಶೇ 60ರಷ್ಟು ಚೀಸ್ ಇರುತ್ತದೆ. ಉಳಿದದ್ದು ಹೈಡ್ರೋಜನೀಕರಿಸಿದ ಸಸ್ಯಜನ್ಯ ಎಣ್ಣೆ ಇರುತ್ತದೆ. ಹೀಗಾಗಿ ಗ್ರಾಹಕರಿಗೆ ತಾವು ಸೇವಿಸುವ ಆಹಾರದಲ್ಲಿ ಬಳಸುವ ಪದಾರ್ಥಗಳ ಸಾಚಾತನ ಪ್ರಮಾಣ ಅರಿವಾಗಬೇಕು ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಅಭಿಮನ್ಯು ಕಾಳೆ ಹೇಳಿದ್ದಾರೆ.

ಈ ಘಟನೆ ನಂತರ ಮೆಕ್‌ಡೊನಾಲ್ಡ್ಸ್‌ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ನಿಜವಾದ ಸಂಗತಿ ಇದು: ನಮ್ಮಲ್ಲಿ ತಯಾರಾಗುವ ಎಲ್ಲಾ ಉತ್ಪನ್ನಗಳಲ್ಲೂ ನೈಜ ಹಾಗು ಶುದ್ಧ ಚೀಸ್ ಅನ್ನೇ ಬಳಸಲಾಗುತ್ತಿದೆ. ನಾವು ಬಳಸುವ ರುಚಿಕಟ್ಟಾದ ಪದಾರ್ಥಗಳಲ್ಲಿ ಉತ್ಕೃಷ್ಟ ಗುಣಮಟ್ಟ ಹಾಗೂ ಪಾರದರ್ಶಕತೆಯನ್ನು ಸದಾ ಕಾಪಾಡಲಾಗುತ್ತಿದೆ. ನೀವು ಸೇವಿಸುವ ಚೀಸ್‌ ಬರ್ಗರ್‌ನಲ್ಲಿ ಹೈನು ಆಧಾರಿತ ನೈಜ ಚೀಸ್ ಬಳಸಲಾಗಿದೆ. ಬರ್ಗರ್ ಪ್ಯಾಟೀಸ್‌ಗಳನ್ನು ನೈಜ ಚೀಸ್‌ನಿಂದಲೇ ತಯಾರಿಸಲಾಗುತ್ತಿದೆ’ ಎಂದು ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.