ADVERTISEMENT

ಮಹಾರಾಷ್ಟ್ರ, ಹರಿಯಾಣ: ಚುನಾವಣೆ ಪ್ರಚಾರ ಅಂತ್ಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 17:18 IST
Last Updated 19 ಅಕ್ಟೋಬರ್ 2019, 17:18 IST
   

ಮುಂಬೈ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಶನಿವಾರ ಸಂಜೆ ಅಂತ್ಯವಾಗಿದೆ. ಎರಡೂ ರಾಜ್ಯಗಳಲ್ಲಿ ಇದೇ 21ರಂದು (ಸೋಮವಾರ) ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ದೇಶದ ಗಮನ ಸೆಳೆದಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ– ಶಿವಸೇನಾ ಮೈತ್ರಿಕೂಟವು ಗೆಲುವಿನ ವಿಶ್ವಾಸದಲ್ಲಿವೆ. ಕಾಂಗ್ರೆಸ್‌– ಎನ್‌ಸಿಪಿ ಮೈತ್ರಿಕೂಟವು ಪೈಪೋಟಿ ಒಡ್ಡುವ ನಿರೀಕ್ಷೆ ಇದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರದ ರದ್ದತಿ, ಬಾಲಾಕೋಟ್‌ ದಾಳಿ ಮತ್ತು ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿಯು ಮಹಾರಾಷ್ಟ್ರದಲ್ಲಿ ಚುನಾವಣೆಯನ್ನು ಎದುರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಚುನಾವಣಾ ಭಾಷಣಗಳಲ್ಲಿ ಈ ಮಾತುಗಳೇ ಪುನರಾವರ್ತನೆಯಾಗಿವೆ. ಬಿಜೆಪಿ ನಾಯಕರು ತೀರಾ ಆಕ್ರಮಣಕಾರಿಯಾಗಿ ಪ್ರಚಾರ ನಡೆಸಿದ್ದಾರೆ.

ADVERTISEMENT

‘ಮಹಾರಾಷ್ಟ್ರವನ್ನು ಬರಮುಕ್ತರಾಜ್ಯವನ್ನಾಗಿ ಮಾಡಲಾಗುವುದು. ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಆರ್ಥಿಕತೆಯನ್ನು ₹ 72 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು’ ಎಂದು ಫಡಣವೀಸ್ ಅವರು ಶನಿವಾರವೂ ಹೇಳಿದ್ದಾರೆ.

ಬಿಜೆಪಿಯ ಮೈತ್ರಿಪಕ್ಷವಾಗಿರುವ ಶಿವಸೇನಾ, ಎನ್‌ಡಿಎಯ ವಿಚಾರಗಳ ಜತೆಗೆ ಸ್ಥಳೀಯ ಸಮಸ್ಯೆಗಳನ್ನೂ ಚುನಾವಣೆಯ ವಿಷಯವನ್ನಾಗಿಸಿಕೊಂಡಿದೆ.

ಬಿಜೆಪಿ– ಶಿವಸೇನಾ ಮೈತ್ರಿಕೂಟದ ಫಲವಾಗಿ ಟಿಕೆಟ್‌ ತಪ್ಪಿಸಿಕೊಂಡ ಎರಡೂ ಪಕ್ಷದ ಹಲವು ನಾಯಕರು, ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ. 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿಈ ಮೈತ್ರಿಕೂಟಕ್ಕೆ ಬಂಡಾಯದ ಬಿಸಿ ತಟ್ಟುವ ಸಾಧ್ಯತೆ ಇದೆ.

ವಿಪಕ್ಷಗಳ ಭಿನ್ನ ಹಾದಿ:ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟವು ತನ್ನದೇ ಸಮಸ್ಯೆಗಳಿಂದ ದುರ್ಬಲವಾಗಿದೆ. ಕಾಂಗ್ರೆಸ್‌ ಪಕ್ಷದ ಕೇಂದ್ರ ನಾಯಕರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಯಾರೂ ಮಹಾರಾಷ್ಟ್ರದತ್ತ ಪ್ರಚಾರಕ್ಕೆ ಸುಳಿದಿಲ್ಲ. ರಾಹುಲ್ ಗಾಂಧಿ ಒಂದೆರಡು ಕಡೆ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕಾಂಗ್ರೆಸ್‌ನ ಸ್ಥಳೀಯ ನಾಯಕರು ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.

ಎನ್‌ಸಿಪಿಯ ಹಲವು ನಾಯಕರು ಪಕ್ಷ ತೊರೆದು, ಬಿಜೆಪಿ ಸೇರಿದ್ದಾರೆ. ಪಕ್ಷದ ಮುಖ್ಯಸ್ಥ ಶರದ್ ಪವಾರ್ ಏಕಾಂಗಿಯಾಗಿ ಮೈತ್ರಿಕೂಟದ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಬಿಜೆಪಿಗೆ ಜವಾನ್‌–ಕಿಸಾನ್‌ ಆಧಾರ
ರೇವರಿ: ಹರಿಯಾಣದಲ್ಲಿ ಸೈನಿಕರು ಮತ್ತು ರೈತರ ವಿಷಯವನ್ನು ಮುಂದಿಟ್ಟು ಬಿಜೆಪಿಯು ಚುನಾವಣೆಯನ್ನು ಎದುರಿಸುತ್ತಿದೆ.

‘ಸ್ವಾತಂತ್ರ್ಯ ಬಂದು 70 ವರ್ಷವಾದರೂ ಹುತಾತ್ಮ ಸೈನಿಕರು ಮತ್ತು ಪೊಲೀಸರ ಸ್ಮಾರಕ ನಿರ್ಮಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡಿರಲಿಲ್ಲ. ಒಂದು ಶ್ರೇಣಿ, ಒಂದು ಪಿಂಚಣಿ (ಒಆರ್‌ಒಪಿ) ಯೋಜನೆಯನ್ನು ಜಾರಿಗೆ ತಂದದ್ದು ನಾವು. ಇದನ್ನೂ ಕಾಂಗ್ರೆಸ್‌ ಕಡೆಗಣಿಸಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆರೋಪಿಸಿದ್ದಾರೆ.

ಕಾಂಗ್ರೆಸ್‌– ಐಎನ್‌ಎಲ್‌ಡಿ ಮೈತ್ರಿಕೂಟವು ಆಡಳಿತಾರೂಢ ಬಿಜೆಪಿಗೆ ಪೈಪೋಟಿ ಒಡ್ಡುವ ವಿಶ್ವಾಸದಲ್ಲಿದೆ. ರಾಜ್ಯದಲ್ಲಿ ನಡೆಯಬೇಕಿದ್ದ ಸಾರ್ವಜನಿಕ ಸಭೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗೈರು ಆಗಿದ್ದರು. ಅವರ ಬದಲಿಗೆ ರಾಹುಲ್ ಗಾಂಧಿ ಪ್ರಚಾರ ನಡೆಸಿದ್ದರು. ಬಿಜೆಪಿಯ ಪರವಾಗಿ ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಹಲವು ಬಾರಿ ಪ್ರಚಾರ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.